ಹೊಸದಿಗಂತ ವರದಿ,ಚಿತ್ರದುರ್ಗ:
ಸರ್ಕಾರ ಇದ್ದಷ್ಟು ದಿನ ಕಾಸು ಮಾಡಿಕೊಂಡು ಹೋಗಬಹುದು ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೈ ಶಾಸಕರೇ ಮಾತಾಡುತ್ತಿದ್ದಾರೆ ಎಂದು ವಿಧಾನ ಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತದಲ್ಲಿ ಸಿದ್ದರಾಮಯ್ಯ ಮಾತು ನಡೆಯುತ್ತಿಲ್ಲ. ಡಿಕೆಶಿ ಆಡಿದ್ದೇ ಆಟ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯ ಸರ್ಕಾರ ವೆಂಟಿಲೇಷನ್‌ನಲ್ಲಿದೆ. ಸಿಎಂ ಸಿದ್ದರಾಮಯ್ಯ ಜೀವನ ತೆರೆದ ಪುಸ್ತಕ ಎಂದು ಹೇಳುತ್ತಾರೆ. ಸಚಿವ ಜಮೀರ್ ಅಹಮದ್ ತೆರೆದೇ ದುಡ್ಡು ಹಂಚುತ್ತಿದ್ದಾನೆ. ವಯನಾಡ್‌ಗೆ ಅಕ್ಕಿ ಹೋಗಿದ್ದು ತೆರೆದೇ ಹಂಚಿದ್ದಾರೆ. ಈ ಕುರಿತು ಪ್ರಧಾನಿಗೆ ಮಾಹಿತಿ ಇರೋದಿಲ್ಲವೇ? ೭೦೦ ಕೋಟಿ ಹಣ ಮಾಹಾರಾಷ್ಟ್ರಕ್ಕೆ ಹೋಗಿದೆ. ಆದರೆ ಕಾಂಗ್ರೆಸ್ ನಾಯಕರು ಸಾಕ್ಷಿಗುಡ್ಡೆ ಕೇಳುತ್ತಾರೆಂದು ಲೇವಡಿ ಮಾಡಿದರು.
ಸರ್ಕಾರದ ಭ್ರಷ್ಟಾಚಾರದ ವಿರುದ್ಧ ರಾಜ್ಯಪಾಲರಿಗೆ, ಸಿಎಂಗೆ ದೂರು ನೀಡಲಾಗಿದೆ. ಕಮಿಷನರ್, ಡಿಸಿಗೆಷ್ಟು ರೇಟ್ ಎಂದು ಡಿಟೇಲಾಗಿ ದೂರು ನೀಡಲಾಗಿದೆ. ತೆರೆದ ಪುಸ್ತಕದ ಅಕೌಂಟನ್ನೆಲ್ಲಾ ದೂರಲ್ಲಿ ತೋರಿಸಿದ್ದಾರೆ. ಬಾರ್ ಮಾಲೀಕರು ಪ್ರತಿಭಟನೆಗೆ ಕರೆ ನೀಡಿದ್ದಾರೆ. ರಾಜ್ಯದಲ್ಲಿ ವೈನ್ ಸ್ಟೋರ್, ಬಾರ್, ಪಬ್‌ಗೆ ದರ ನಿಗದಿ ಮಾಡಿದ್ದಾರೆ. ಚುನಾವಣೆಗಾಗಿ ವಾರದಲ್ಲಿ ೯೦೦ ಕೋಟಿ ಸಂಗ್ರಹಿಸಿದ್ದಾರೆ. ವಾರದಲ್ಲೇ ೧೮ ಕೋಟಿಸಂಗ್ರಹಿಸಿ ದಾಖಲೆ ಬರೆದಿದ್ದಾರೆ. ಇಲಾಖೆಯ ಪ್ರಳಯಾಂತಕ ಅಧಿಕಾರಿಗಳಿಗೆ ಶಹಬ್ಬಾಷ್‌ಗಿರಿ ಕೊಡಬೇಕು ಎಂದರು.
ಹುಟ್ಟಿದರೂ ಎಸ್‌ಐಟಿ, ಸತ್ತರೂ ಎಸ್‌ಐಟಿ, ಮದುವೆಗೊಂದು ಎಸ್‌ಐಟಿ. ಎಸ್‌ಐಟಿ ಮೂಲಕ ತನಿಖೆ ಮಾಡಿ ಮುಚ್ಚಿ ಹಾಕಲಾಗುತ್ತಿದೆ. ಕೆಂಪಣ್ಣ ದೂರು ಕೊಟ್ಟಾಗ ಸಿದ್ದರಾಮಯ್ಯ ಪಂಚೆ ಎತ್ತಿ ಊರೂರು ತಿರುಗಿದ್ದರು. ನಾವು ದಾಖಲೆ ಇದ್ದರೆ ಕೊಡಪ್ಪ ಎಂದು ಕೆಂಪಣ್ಣನ ಕೇಳಿದ್ದೆವು. ಬದುಕಿರೋವರೆಗೂ ಕೆಂಪಣ್ಣ ದಾಖಲೆ ತಂದು ಕೊಡಲಿಲ್ಲ. ಈಗ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶೇ.೬೦ ದೂರು ದಾಖಲಾಗಿದೆ ಎಂದು ಹೇಳಿದರು.
ಈ ಮನೆಹಾಳು ಕಾಂಗ್ರೆಸ್ ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಕ್ಕೆ ದುಡ್ಡಿಲ್ಲ. ಶಾಸಕರು, ಮಂತ್ರಿಗಳಿಗೆ ಯಾವುದೇ ಅನುದಾನ ಇಲ್ಲದೇ ಹಣಕ್ಕಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ವರ್ಗಾವಣೆ ದಂಧೆ ಮೂಲಕ ಹಣ ಮಾಡುತ್ತಿದ್ದಾರೆ. ಕರ್ನಾಟಕ ಎಟಿಎಂ ಮಾಡಿಕೊಂಡು ಲೂಟಿ ಹೊಡೆಯುತ್ತಿದ್ದಾರೆ. ರಾಜ್ಯದ ಹಣವನ್ನು ಬೇರೆ ರಾಜ್ಯಗಳ ಚುನಾವಣೆಗೆ ಕಳಿಸುತ್ತಿದ್ದಾರೆ ಎಂದು ಆಶೋಕ್ ದೂರಿದರು.
ಅಂಬೇಡ್ಕರ್ ಪರಕೀಯ ಧರ್ಮ ಸೇರಲ್ಲ ಎಂದು ಹೇಳಿದ್ದರು. ಇವರ ಕುರಿತೇ ಪರಕೀಯರು ಎಂಬ ಪದ ಬಳಸಿದ್ದಾರೆ. ಮುಸ್ಲಿಂ ಧರ್ಮಕ್ಕೆ ಹೋದರೆ ದೇಶದಲ್ಲಿ ಭಯ ಸೃಷ್ಠಿ ಎಂದಿದ್ದಾರೆ. ಕ್ರೈಸ್ತ, ಮುಸ್ಲಿಂ ಧರ್ಮಕ್ಕೆ ಸೇರಿದರೆ ರಾಷ್ಟ್ರಕ್ಕೆ ಅಭದ್ರತೆ ಎಂದು ಹೇಳಿದ್ದರು. ದೇಶ ಭದ್ರತೆಗಾಗಿ ದೇಶದಲ್ಲೇ ಹುಟ್ಟಿದ ಭೌದ್ಧ ಧರ್ಮ ಸೇರುತ್ತೇನೆ ಎಂದಿದ್ದರು. ನೆಹರು, ಅಂಬೇಡ್ಕರ್ ಅವರನ್ನು ಸೋಲಿಸಿದ್ದರು. ಈಗ ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಚಿತ್ರ ಹಿಡಿದು ಓಡಾಡುತ್ತಾರೆ. ಈ ಆಟ ಇನ್ನು ನಡೆಯಲ್ಲ. ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಟೀಕಿಸಿದರು.
ಚನ್ನಪಟ್ಟಣದಲ್ಲಿ ಡಿಕೆಶಿ ಸಿಎಂ ಎಂದು ಘೋಷಿಸುತ್ತಿದ್ದಾರೆ. ಜಮೀರ್ ಯಾವಾಗ ಯಾರ ಪರ ಇರುತ್ತಾನೋ ಗೊತ್ತಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಐದು ವರ್ಷ ಅಂದಿದ್ದರು. ಆಗಲೇ ೧೪ ಶಾಸಕರು ಪಕ್ಷ ಬಿಟ್ಟು ಬಿಜೆಪಿಗೆ ಬಂದಿದ್ದರು. ಸಿದ್ದರಾಮಯ್ಯ ಜತೆ ಇದ್ದರೆ ಕಡಲೆಕಾಯಿನೂ ಸಿಗಲ್ಲ ಎಂದು ಶಾಸಕರಿಗೆ ಗೊತ್ತಿದೆ. ಮಠಾಧೀಶರು, ರಾಜಕಾರಣಿಗಳು, ಜ್ಯೋತಿಷಿಗಳಿಂದ ಸರ್ಕಾರ ಉಳಿಯಲ್ಲ. ಭವಿಷ್ಯ ಗಟಗಟಿಯಾಗಿದ್ದರೆ ನಾನೇ ಸಿಎಂ ಎಂದು ಹೇಳುವ ಅಗತ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸಂಪತ್‌ಕುಮಾರ್, ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜನ್, ವಕ್ತಾರ ನಾಗರಾಜ್ ಬೇದ್ರೆ ಉಪಸ್ಥಿತರಿದ್ದರು.