ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಮಹಾರಾಷ್ಟ್ರದ ಯವತ್ಮಾಲ್‌ಗೆ ಆಗಮಿಸಿದಾಗ ಚುನಾವಣಾ ಅಧಿಕಾರಿಗಳು ತಮ್ಮ ಬ್ಯಾಗ್ ಅನ್ನು ಪರಿಶೀಲಿಸಿದ್ದಾರೆ ಎಂದು ಹೇಳಿದ್ದರು. ಅಲ್ಲದೆ ಚುನಾವಣಾ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಿರಿಯ ನಾಯಕರ ಬ್ಯಾಗ್‌ಗಳನ್ನು ಸಹ ಪರಿಶೀಲಿಸುತ್ತಾರೆಯೇ? ಎಂದು ಪ್ರಶ್ನಿಸಿದ್ದರು.
ಇದಕ್ಕೆ ಚುನಾವಣಾ ಆಯೋಗದ ಮೂಲಗಳು ಪ್ರಮಾಣಿತ ಕಾರ್ಯಾಚರಣೆಯ ಭಾಗವಾಗಿ(SOP) ರಾಜಕೀಯ ಉನ್ನತ ನಾಯಕರ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಪರಿಶೀಲಿಸಲಾಗುತ್ತದೆ ಎಂದು ಉತ್ತರ ನೀಡಿದೆ.
ಹಿಂದಿನ ಚುನಾವಣೆಯಲ್ಲಿಯೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಪರಿಶೀಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ಸಂಸ್ಥೆಗಳು ಕಟ್ಟುನಿಟ್ಟಾದ ಎಸ್‌ಒಪಿಗಳನ್ನು ಅನುಸರಿಸುತ್ತಿವೆ. 2024ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ, ಬಿಹಾರದಲ್ಲಿ ಇದೇ ರೀತಿಯ ಪ್ರಶ್ನೆಗಳನ್ನು ಎತ್ತಲಾಗಿತ್ತು ಮತ್ತು ಏಪ್ರಿಲ್‌ನಲ್ಲಿ ನಡ್ಡಾ ಸೇರಿದಂತೆ ಪ್ರಮುಖ ನಾಯಕರ ಹೆಲಿಕಾಪ್ಟರ್‌ಗಳನ್ನು ಭಾಗಲ್ಪುರ ಜಿಲ್ಲೆಯಲ್ಲಿ ಪರಿಶೀಲಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ಘೋಷಣೆಯ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ಎಲ್ಲಾ ರಾಜಕೀಯ ನಾಯಕರ ಹೆಲಿಕಾಪ್ಟರ್‌ಗಳನ್ನು ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಲು ಜಾರಿ ಸಂಸ್ಥೆಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಹೇಳಿದ್ದರು.