ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ ಗ್ರಾಮ ಮತ್ತೊಮ್ಮೆ ಧಾರ್ಮಿಕ ಸೌಹಾರ್ದದ ಪ್ರತೀಕವಾಗಿ ಗಮನ ಸೆಳೆದಿದೆ.
ಹಿಂದು ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಗ್ರಾಮದಲ್ಲಿ, ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಈ ಬಾರಿಯೂ ಹಿಂದು ಮತ್ತು ಮುಸ್ಲಿಂ ಸಮುದಾಯದವರು ಸೇರಿ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದಾರೆ.
ಮೊಹರಂ ಅಂಗವಾಗಿ ಗ್ರಾಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಪ್ರದಾಯಬದ್ಧ ಆಚರಣೆಗಳು ಹಾಗೂ ಭವ್ಯ ಮೆರವಣಿಗೆ ನಡೆಯಿತು. ಅಲಾಯಿ ದೇವರನ್ನು ಡೋಲಿಯಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಡೋಲು, ತಾಸೆ ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳ ನಾದದ ನಡುವೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಜಾತಿ-ಧರ್ಮದ ಭೇದವಿಲ್ಲದೆ ಭಾಗವಹಿಸಿದರು.
ಇದನ್ನೂ ಓದಿ:
ಗ್ರಾಮದಲ್ಲಿ ಹಲವು ತಲೆಮಾರುಗಳಿಂದ ಎರಡು ಸಮುದಾಯದವರು ಪರಸ್ಪರ ಸಹಕಾರ ಮತ್ತು ಗೌರವದಿಂದ ಮೊಹರಂ ಆಚರಿಸುತ್ತಿದ್ದು, ಈ ಸಂಪ್ರದಾಯ ಇಂದಿಗೂ ಅಚಲವಾಗಿ ಮುಂದುವರಿದಿದೆ. ಈ ಬಾರಿಯ ಆಚರಣೆಯಲ್ಲೂ ಹಿಂದು ಮತ್ತು ಮುಸ್ಲಿಂ ಸಮುದಾಯದವರು ಕೈಜೋಡಿಸಿ ಹಬ್ಬವನ್ನು ಯಶಸ್ವಿಗೊಳಿಸಿದ್ದು, ಸಾಮಾಜಿಕ ಸಾಮರಸ್ಯ, ಸಹಬಾಳ್ವೆ ಮತ್ತು ಭಾವೈಕ್ಯತೆಗೆ ರಾಮನಾಳ ಗ್ರಾಮ ಮತ್ತೊಮ್ಮೆ ಮಾದರಿಯಾಗಿದೆ.



