ಹೊಸ ದಿಗಂತ ವರದಿ, ಕಲಬುರಗಿ:
ಬಳ್ಳಾರಿಯಲ್ಲಿ ನ.20 ರಂದು ಬಿಜೆಪಿ ಎಸ್‍ಟಿ ನವಶಕ್ತಿ ಸಮಾವೇಶ ನಡೆಯಲಿದ್ದು, ಕಲಬುರಗಿ ಜಿಲ್ಲೆಯಿಂದ 5 ಸಾವಿರ ಜನ ತೆರಳಲಿದ್ದಾರೆ ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಎಸ್‍ಟಿ ಮೋರ್ಚಾದ ರಾಜ್ಯ ಮುಖಂಡ ನಂದಕುಮಾರ ಮಾಲಿಪಾಟೀಲ್ ತಿಳಿಸಿದರು.
ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳಿಂದ ಸುಮಾರು 10 ಲಕ್ಷ ಜನ ಸೇರುವ ನಿರೀಕ್ಷೆ ಹೊಂದಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಪರಿಶಿಷ್ಟ ವರ್ಗಗಳ ಮೀಸಲಾತಿ ಹೆಚ್ಚಿಸಿದೆ. ಇದರಿಂದ ಬಿಜೆಪಿ ಸರ್ಕಾರ ಎಸ್‍ಸಿ, ಎಸ್‍ಟಿ ವಿರೋಧಿ ಅಲ್ಲ ಎಂಬುದನ್ನು ಮೀಸಲಾತಿ ಹೆಚ್ಚಳದೊಂದಿಗೆ ರುಜುವಾತು ಪಡಿಸಲಾಗಿದೆ ಎಂದು ಅವರು ಗುರುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಸೇರಿದಂತೆ ಅನೇಕ ಸಚಿವರು, ಶಾಸಕರು, ಕೋರ್ ಕಮಿಟಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಬಿಜೆಪಿ ನಗರ ಅಧ್ಯಕ್ಷ ಸಿದ್ದಾಜೀ ಪಾಟೀಲ್, ಪ್ರಮುಖರಾದ ಚನ್ನಪ್ಪ ಸುರಪುರ, ಶರಣು ಸುಬೇದಾರ್ ಮತ್ತಿತರರಿದ್ದರು.