ಮೂಡುಬಿದಿರೆಯಲ್ಲಿ ಕುರಾನಿಕ್ ಪ್ರೀ ಸ್ಕೂಲ್ ಅಕ್ರಮ ನಿರ್ಮಾಣ: ತೆರವಿಗೆ ಹಿಂಜಾವೇ ಆಗ್ರಹ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮೂಡುಬಿದಿರೆ ತಾಲೂಕಿನ ಪ್ರಾಂತ್ಯ ಗ್ರಾಮದಲ್ಲಿ ಮನೆ ಕಟ್ಟುವ ಉದ್ದೇಶದಿಂದ ಪುರಸಭೆಯಿಂದ ಪರವಾನಗಿ ಪಡೆದು ಆ ಜಾಗದಲ್ಲಿ ಜರಾತುಲ್ ಕುರಾನ್ ಕುರಾನಿಕ್ ಪ್ರೀ ಸ್ಕೂಲ್ ಮತ್ತು ಅಲ್ ಮಫಾಝ್ ವುಮೆನ್ಸ್ ಶರಿಯತ್ ಕಾಲೇಜು ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಮೂಡುಬಿದಿರೆ ಪುರಸಭೆ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೂಡಬಿದಿರೆ ತಾಲೂಕು ಹಿಂದು ಜಾಗರಣ ವೇದಿಕೆ ಒತ್ತಾಯಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದು ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಪ್ರಶಿಕ್ಷಣಾ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯ, ಅಕ್ರಮ ಕಟ್ಟಡವನ್ನು ತೆರವುಗೊಳಿಸದಿದ್ದಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಗುರುವಾರ ಪ್ರತಿಭಟನೆಗೆ ನಿರ್ಧರಿಸಲಾಗಿತ್ತಾದರೂ ಪುರಸಭೆ ಭರವಸೆ ನೀಡಿರುವ ಮೇರೆಗೆ ಪ್ರತಿಭಟನೆ ಮುಂದೂಡಲಾಗಿದೆ. ಆದಷ್ಟು ಶೀಘ್ರ ಅಕ್ರಮ ಕಟ್ಟಡದ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಒಟ್ಟು 0.17.17 ಎಕರೆ ಜಮೀನಿನಲ್ಲಿ ಮನೆ ನಿರ್ಮಾಣಕ್ಕಾಗಿ ತಪ್ಸೀನಾ ಅವರಿಗೆ 688.85 ಚ.ಮೀ.ವಿಸ್ತೀರ್ಣದ ಮನೆ ಕಟ್ಟಲು ಪುರಸಭೆ ಕಟ್ಟಡ ಪರವಾನಗಿ ನೀಡಿತ್ತು. ಆದರೆ ನಿಯಮ ಉಲ್ಲಂಘಿಸಿ ಸುಮಾರು 4000 ಚ.ಮೀ. ಅಡಿಯ ಅಕ್ರಮ ಶಾಲೆಯನ್ನು ನಿರ್ಮಾಣ ಮಾಡಲಾಗಿದೆ. ಈ ಕಟ್ಟಡದಲ್ಲಿ ಅಲ್-ಮಫಾಝ್ ಚಾರಿಟೇಬಲ್ ಟ್ರಸ್ಟ್‌ನವರು ಜರಾತುಲ್ ಕುರಾನ್ ಕುರಾನಿಕ್ ಪ್ರೀ ಸ್ಕೂಲ್ ಮತ್ತು ಅಲ್-ಮಫಾಝ್ ವುಮೆನ್ಸ್ ಶರಿಯತ್ ಕಾಲೇಜನ್ನು ನಡೆಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಂಸ್ಥೆ ತನ್ನ ಕಾರ್ಯಚಟುವಟಿಕೆ ಮುಂದುವರಿಸಿದ್ದು, ಸದ್ಯ ಸುಮಾರು 150ರಷ್ಟು ಮಕ್ಕಳಿದ್ದಾರೆ. ಸರಕಾರದ ಯಾವುದೇ ಇಲಾಖೆಯಿಂದ ಪರವಾನಗಿ ಪಡೆಯದೆ ಸಂಸ್ಥೆ ನಡೆಸುತ್ತಿರುವುದರ ವಿರುದ್ಧ ಸೂಕ್ತ ಕ್ರಮವಾಗಬೇಕು ಎಂದು ಅಡ್ಯಂತಾಯ ಆಗ್ರಹಿಸಿದರು.
ಲ್ಯಾಂಡ್ ಜಿಹಾದಿನ ಭಾಗ
ಸರಕಾರಿ ಜಾಗವನ್ನು ಒತ್ತುವರಿ ಮಾಡಿ, ಕಾನೂನಿನ ಚೌಕಟ್ಟನ್ನು ಮೀರಿ ಅಕ್ರಮವಾಗಿ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ. ಇದು ಲ್ಯಾಂಡ್ ಜಿಹಾದಿನ ಒಂದು ಭಾಗವೇ ಆಗಿದೆ. ರಾಜ್ಯದ ಉದ್ದಗಲಕ್ಕೂ ಈ ರೀತಿ ಸರಕಾರಿ ಜಾಗವನ್ನು ಒತ್ತುವರಿ ಮಾಡಲಾಗುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅಲ್ಲದೆ ಮೂಡಬಿದಿರೆ ಪ್ರಾಂತ್ಯ ಗ್ರಾಮದಲ್ಲಿ ಅಕ್ರಮವಾಗಿ ಧಾರ್ಮಿಕ ಶಿಕ್ಷಣ ಕಟ್ಟಡ ನಿರ್ಮಿಸಿರುವ ಅಲ್-ಮಫಾಝ್ ಚಾರಿಟೇಬಲ್ ಟ್ರಸ್ಟ್‌ಗೆ ಹಣ ಎಲ್ಲಿಂದ ಬರುತ್ತಿದೆ ಎಂಬುದರ ಕುರಿತಂತೆಯೂ ತನಿಖೆಯಾಗಬೇಕು ಎಂದು ರಾಧಾಕೃಷ್ಣ ಅಡ್ಯಂತಾಯ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ವಿಭಾಗ ಪ್ರಮುಖ್, ರತ್ನಾಕರ ಶೆಟ್ಟಿ, ಜಿಲ್ಲಾ ಸಂಚಾಲಕ ಪ್ರಕಾಶ್ ಕುಂಪಲ, ಸಹ ಸಂಚಾಲಕ್ ಸಮಿತ್‌ರಾಜ್ ಧರೆಗುಡ್ಡೆ, ಸಂಪರ್ಕ ಪ್ರಮುಖ್ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ, ಮೂಡಬಿದಿರೆ ತಾಲೂಕು ಸಂಚಾಲಕ ಸಂದೀಪ್ ಹೆಗ್ಡೆ, ಚಿನ್ಮಯ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!