ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ: ಹಂಗಾಮಿ ಅಧ್ಯಕ್ಷ ಸ್ಥಾನವೇರಿದ ವಿಕ್ರಮ ಸಿಂಘೇ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಾಜೀನಾಮೆಗೂ ಮುನ್ನವೇ ಅಧ್ಯಕ್ಷ ಗೋಟಬಾಯಾ ರಾಜಪಕ್ಸೆ ಮಾಲ್ಡೀವ್ಸ್ ಗೆ ಪಲಾಯನ ಮಾಡಿದ ಬೆನ್ನಲ್ಲೇ ಉದ್ರಿಕ್ತ ಪ್ರತಿಭಟನಾಕಾರರ ಗುಂಪು ಶ್ರೀಲಂಕಾದ ಸಂಸತ್‌ ಭವನದ ಸಮೀಪದಲ್ಲಿ ಜಮಾಯಿಸಿದ್ದಾರೆ.

ಕೆಲವೆಡೆ ಗೋಟಬಾಯಾ ರಾಜಿನಾಮೆಯನ್ನು ಹಸ್ತಾಂತರಿಸಿಯೇ ಓಡಿ ಹೋಗಿದ್ದಾರೆ ಎಂದು ವರದಿಯಾಗಿತ್ತು ಆದರೆ ಈ ಕುರಿತು ಅಲ್ಲಿನ ಸ್ಪೀಕರ್‌ ಮಹಿಂದ ಯಾಪಾ ಅಬೇವರ್ದನಾ “ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ರಾಜೀನಾಮೆಯನ್ನು ನಾವು ಇನ್ನೂ ಸ್ವೀಕರಿಸಿಲ್ಲ, ಇನ್ನೊಂದು ದಿನದಲ್ಲಿ ಅದನ್ನು ಪಡೆಯುತ್ತೇವೆ” ಎಂದು ಹೇಳಿದ್ದಾರೆ. ಈ ನಡುವೆ ಗೋಟಬಾಯಾ ಮಾಲ್ಡೀವ್ಸ್‌ನಿಂದ ಬೇರೊಂದು ದೇಶಕ್ಕೆ ಓಡಿಹೋಗಲಿದ್ದಾರೆ ಎಂಬ ವದಂತಿಗಳೂ ಹರಿದಾಡುತ್ತಿವೆ.

ಇನ್ನೊಂದೆಡೆ ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು ಸಂಸತ್ತು ಮತ್ತು ಪ್ರಧಾನಿಯವರ ಮನೆ ಕಡೆಗೆ ಮೆರವಣಿಗೆ ನಡೆಸುತ್ತಿದ್ದಾರೆ, ರಸ್ತೆಗಳ ಉದ್ದಕ್ಕೂ ಸೈನಿಕರೇ ಪ್ರತಿಭಟನಾಕಾರರಿಗೆ ನೀರು ನೀಡುತ್ತಿದ್ದಾರೆ. ಸೇನೆ ಹಾಗೂ ವಿಶೇಷ ಕಾರ್ಯಪಡೆಯವರು ಹಿಂದೆ ಸರಿದಿದ್ದು ಪ್ರಧಾನಿ ಕಚೇರಿಗೆ ಮೆರವಣಿಗೆ ಹೊರಟ ಪ್ರತಿಭಟನಾಕಾರರಿಗೆ ಮುಕ್ತ ಮಾರ್ಗ ನಿರ್ಮಾಣವಾಗಿದೆ. ಪೊಲೀಸರು ಮತ್ತು ಸೇನಾ ಸಿಬ್ಬಂದಿ ಪ್ರತಿಭಟನಾಕಾರರನ್ನು ಶಾಂತಿಯುತವಾಗಿ ಮೆರವಣಿಗೆ ಮಾಡುವಂತೆ ಮತ್ತು ಸಾರ್ವಜನಿಕ ಆಸ್ತಿಯನ್ನು ನಾಶ ಮಾಡದಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

“ಸಂವಿಧಾನದ ಪ್ರಕಾರವೇ ಅಧಿಕಾರ ಪರಿವರ್ತನೆ ಆಗಲಿದೆ. ಕಾನೂನು ತಜ್ಞರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ತಮ್ಮ ಸಲಹೆಗಳನ್ನು ಕಳುಹಿಸುತ್ತಿದ್ದಾರೆ” ಎಂದು ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಾನಿಲ್ ವಿಕ್ರಮಸಿಂಘೆ ಅವರನ್ನು ಅಧ್ಯಕ್ಷ ಸ್ಥಾನದಿಂದ ದೂರವಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಅದು ಸಂಭವಿಸಿದರೆ ಹೋರಾಟ ಮುಂದುವರೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೊಲಂಬೊದಲ್ಲಿರುವ ಪಿಎಂ ವಿಕ್ರಮಸಿಂಘೆ ಅವರ ಮನೆಯ ಗೋಡೆಗಳನ್ನು ಪ್ರತಿಭಟನಾಕಾರರು ಒಡೆದು ಹಾಕುತ್ತಿದ್ದಾರೆ ಮತ್ತು ಮಧ್ಯಾಹ್ನ 1 ಗಂಟೆಯ ಒಳಗೆ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಈ ನಡುವೆ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಶ್ರೀಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ದೇಶದ ಪಶ್ಚಿಮ ಪ್ರಾಂತ್ಯದಲ್ಲಿ ಕರ್ಫ್ಯೂ ಜಾರಿಗೆ ಆದೇಶಿಸಿದ್ದಾರೆ. ಅಶ್ರುವಾಯು, ಲಾಠಿ ಚಾರ್ಜ್‌ ಮೂಲಕ ವಿಕ್ರಮಸಿಂಘೆ ಅವರ ಮನೆಯ ಬಳಿಯಿರುವ ಪ್ರತಿಭಟನಾಕಾರರನ್ನು ಚದುರಿಸಲು ಪೋಲೀಸರು ಪ್ರಯತ್ನಿಸುತ್ತಿದ್ದಾರೆ.

ಆದರೆ ಈ ಎಲ್ಲ ಬೆಳವಣಿಗೆಗಳ ನಡುವೆಯೇ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ಶ್ರೀಲಂಕಾದ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!