ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕಂಪ ಮತ್ತು ಭೂಕುಸಿತವಾದ ಸ್ಥಳಗಳ ಪರಿಶೀಲನೆ ನಡೆಸಿದ್ದೇನೆ. 4 ಸಂಸ್ಥೆಗಳಿಗೆ ಅಧ್ಯಯನ ಮಾಡಲು ಸೂಚನೆ ಕೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಡಲು ಕೊರೆತ ತಡೆಯಲು ಹೊಸ ತಂತ್ರಜ್ಞಾನದ ಅಳವಡಿಸಲು ತೀರ್ಮಾನಿಸಲಾಗುವುದು. ಉಡುಪಿಯಲ್ಲಿ ಮೂರು ಜಿಲ್ಲೆಗಳ ಅಧಿಕಾರಿಗಳ ಸಭೆ ನಡೆಸಲಿದ್ದೇನೆ.ಮೂರು ಜಿಲ್ಲೆಯ ಹಾನಿಯ ಬಗ್ಗೆ ಸಮಗ್ರ ಚರ್ಚೆ ನಡೆಯುತ್ತದೆ.
ತುರ್ತು ಮತ್ತು ದೀರ್ಘಕಾಲೀನ ಸಮಸ್ಯೆ ಪರಿಹಾರದ ಬಗ್ಗೆ ಚರ್ಚೆ ಮಾಡಲಾಗುತ್ತದೆ. ನಂತರ ಬೈಂದೂರು ತಾಲೂಕು ಮತ್ತು ಕಾಪು ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಯಾದ ಸ್ಥಳಕ್ಕೆ ಭೇಟಿ ಕೊಡುತ್ತೇನೆ.
ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಹತ್ತು ದಿನ ಬಿಟ್ಟು ಭೇಟಿ ನೀಡಲು ನಿರ್ಧರಿಸಿದ್ದು, ನೆರವು ಮತ್ತು ಅಭಿವೃದ್ಧಿ ಕೆಲಸದ ಬಗ್ಗೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ತಿಳಿಸಿದರು.