ಕುಚಲಕ್ಕಿ ವಿತರಣೆ ಅಧ್ಯಯನಕ್ಕೆ ರಾಜ್ಯದಿಂದ ತಂಡ ರಚನೆ: ಸಚಿವ ಕೋಟ ನೇತೃತ್ವದ ಸಭೆಯಲ್ಲಿ ತೀರ್ಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಫಲಾನುಭವಿಗಳಿಗೆ ಪಡಿತರದಲ್ಲಿ ಕುಚಲಕ್ಕಿ ವಿತರಣೆ ಸಂಬಂಧಿಸಿ ಕರ್ನಾಟಕದ ತಂಡ ನೆರೆಯ ಕೇರಳ ರಾಜ್ಯದಲ್ಲಿ ಅಧ್ಯಯನ ನಡೆಸಿ, ವರದಿ ನೀಡಲು ತೀರ್ಮಾನಿಸಲಾಗಿದೆ.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ ಉಪಸ್ಥಿತಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಉಭಯ ಜಿಲ್ಲೆಗಳಿಗೆ ಪಡಿತರಕ್ಕೆ ಕುಚಲಕ್ಕಿ ವಿತರಿಸಲು ತಿಂಗಳಿಗೆ 1ಲಕ್ಷ ಕ್ವಿಂಟಾಲ್ ಅಕ್ಕಿಯ ಆವಶ್ಯಕತೆ ಇದೆ. ವರ್ಷಕ್ಕೆ 12 ಲಕ್ಷ ಕ್ವಿಂಟಾಲ್ ಅಕ್ಕಿ ಪೂರೈಸಲು, ಒಟ್ಟು 18 ಲಕ್ಷ ಕ್ವಿಂಟಾಲ್ ಭತ್ತ ಖರೀದಿಸಬೇಕಾಗಿದೆ. ಪ್ರಸ್ತುತ ಕರಾವಳಿಯಲ್ಲಿ ಭತ್ತದ ಬೇಸಾಯ ಪೂರ್ಣಗೊಂಡಿದ್ದು, ರೈತರು ಭತ್ತವನ್ನು ಮಾರಾಟ ಮಾಡಿಯಾಗಿದೆ. ಕೇಂದ್ರ ಸರಕಾರ ಆಯಾ ಜಿಲ್ಲೆಯ ಭತ್ತ/ಅಕ್ಕಿ ಖರೀದಿಸಿ ಅಲ್ಲಿಯವರಿಗೇ ನೀಡಬೇಕೆಂದು ಆದೇಶಿಸಿದೆ. ಆದರೆ ನಮ್ಮ ಜಿಲ್ಲೆಗಳಲ್ಲೀಗ ಕೆಂಪಕ್ಕಿ ಭತ್ತ ಲಭ್ಯವಿಲ್ಲದೇ ಇರುವುದರಿಂದ, ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಚಿವ ಕೋಟ ತಿಳಿಸಿದರು.

ಕುಚಲಕ್ಕಿ ತಯಾರಿಸುವ ಭತ್ತ ಬೆಳಗಾವಿ, ಮೈಸೂರು, ಮಂಡ್ಯ, ಶಿವಮೊಗ್ಗ ಮೊದಲಾದ ಜಿಲ್ಲೆಗಳಲ್ಲಿವೆ. ಆದ್ದರಿಂದ ಬೇರೆ ಜಿಲ್ಲೆಗಳಲ್ಲಿ ಬೆಳೆದ ಭತ್ತವನ್ನು ಖರೀದಿಸಿ, ಕರಾವಳಿಯ ಮಿಲ್ಲ್‌ಗಳಲ್ಲಿ ಅಕ್ಕಿ ತಯಾರಿಸಿ ವಿತರಿಸಬೇಕಿದೆ. ಇದಕ್ಕೆ ಅನುಮತಿಗಾಗಿ ಕೇಂದ್ರಕ್ಕೆ ಪತ್ರ ಬರೆಯುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಿಗೆ ಮತ್ತು ನಿರ್ದೇಶಕರಿಗೆ ಸೂಚಿಸಿದರು.

ಇಲಾಖೆಯ ಆಯುಕ್ತೆ ಕನಗವಲ್ಲಿ ಅವರು, ನೆರೆಯ ಕೇರಳ ರಾಜ್ಯದಲ್ಲಿ ಕುಚಲಕ್ಕಿ ಬಳಸುತ್ತಾರೆ. ಅಲ್ಲಿ ಪಡಿತರಕ್ಕೆ ಅದೇ ಅಕ್ಕಿ ವಿತರಿಸುತ್ತಾರೆ. ಅವರು ಏನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ, ಭತ್ತ ಅಥವಾ ಅಕ್ಕಿಯನ್ನು ಎಲ್ಲಿಂದ ಖರೀದಿಸುತ್ತಾರೆ, ಇತ್ಯಾದಿ ಕುರಿತು ನಮ್ಮ ರಾಜ್ಯದ ತಂಡ ಅಧ್ಯಯನ ನಡೆಸಲಿ. ವರದಿಯ ಆಧಾರದಲ್ಲಿ ಕೇಂದ್ರಕ್ಕೆ ಪತ್ರ ಬರೆಯಲಾಗುತ್ತದೆ ಎಂದು ಹೇಳಿದರು.

ವಾರದೊಳಗೆ ತಂಡ ರಚಿಸಿ, ಅಧ್ಯಯನ ನಡೆಸುವಂತೆ ಹಾಗೂ ನಿಗಮದ ಉಪಾಧ್ಯಕ್ಷರನ್ನೂ ತಂಡದಲ್ಲಿ ಒಳಗೊಳ್ಳುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿರ್ದೇಶಿಸಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪಡಿತರದಲ್ಲಿ ಕುಚಲಕ್ಕಿ ವಿತರಣೆಗೆ ಈ ವರ್ಷಕ್ಕೆ ಮಾತ್ರ ಕೇಂದ್ರ ಸರಕಾರ ಅನುಮತಿ ನೀಡಿದೆ. ಮುಂದಿನ ಸಾಲಿನಲ್ಲಿ ಕುಚಲಕ್ಕಿ ವಿತರಣೆಗೆ ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಅವಶ್ಯ ಕ್ರಮಗಳನ್ನು ತೆಗೆದುಕೊಂಡು ಸಿದ್ಧವಾಗಬೇಕು. ಇಲ್ಲದಿದ್ದರೆ, ಮುಂದಿನ ವರ್ಷವೂ ಭತ್ತ/ಅಕ್ಕಿಯ ಸಮಸ್ಯೆ ಎದುರಾಗುತ್ತದೆ ಎಂದು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ ಹೇಳಿದರು.

ಬೆಂಬಲ ಬೆಲೆ ಹೆಚ್ಚಿಸಲು ಮನವಿ:
ಇದೇ ವೇಳೆ, ಭತ್ತಕ್ಕೆ ಈಗಿರುವ ಬೆಂಬಲ ಬೆಲೆಯನ್ನು ಹೆಚ್ಚಿಸಲು ಹಾಗೂ ರಾಜ್ಯ ಸರಕಾರದಿಂದ ಹೆಚ್ಚುವರಿ ಬೆಂಬಲ ಬೆಲೆ ನೀಡಲು ಅವಕಾಶ ಕೋರಿ ಕೇಂದ್ರಕ್ಕೆ ಪತ್ರ ಬರೆಯಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!