ಅಲೆಮಾರಿ ಸಮುದಾಯದವರ ವಸತಿಗೆ ಮೀಸಲಿಟ್ಟ ಅನುದಾನ ಅನ್ಯ ಕಾರ್ಯಕ್ಕೆ ಬಳಕೆ ಇಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯ (ಎಸ್ಸಿ-ಎಸ್ಟಿ)ಗಳಿಗೆ ವಸತಿ ಯೋಜನೆಗೆ ಮೀಸಲಿಟ್ಟ 250 ಕೋಟಿ ರೂ.ಗಳನ್ನು ಅನ್ಯ ಕೆಲಸಗಳಿಗೆ ಬಳಸಬಾರದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಾಕೀತು ಮಾಡಿದ್ದಾರೆ.

ಇಂದು ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಅಲೆಮಾರಿ ಮತ್ತು ಅರೆ ಅಲೆಮಾರಿಗಳಿಗೆ ವಸತಿ ಸೌಲಭ್ಯ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರು ಅತೀ ಸಣ್ಣ ಸಮುದಾಯ ಆಗಿರುವುದರಿಂದ ಅವರನ್ನು ವಿಶೇಷ ವರ್ಗ ಎಂದು ಪರಿಗಣಿಸಲಾಗಿದೆ. ಅವರನ್ನು ರೆಗ್ಯುಲರ್ ವಸತಿ ಕಾರ್ಯಕ್ರಮಗಳಲ್ಲಿ ಆಯ್ಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಇದನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಸೀಮಿತಗೊಳಿಸಿ, ಮೊತ್ತವನ್ನು ಫಲಾನುಭವಿಗೆ ನೇರವಾಗಿ ಮನೆ ನಿರ್ಮಾಣಕ್ಕೆ ನೀಡಬೇಕೆಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ನಿಯಮ ಸಡಿಲಿಕೆಗೆ ನಿರ್ದೇಶನ:
ಅಲೆಮಾರಿ ಸಮುದಾಯದವರಲ್ಲಿ ನಿವೇಶನ ಅಥವಾ ಹೆಚ್ಚಿನ ದಾಖಲೆಗಳು ಇಲ್ಲದಿರುವುದರಿಂದ ಅವರಿಗೆ ಕೆಲವು ನಿಯಮಗಳನ್ನು ಸಡಿಲಿಕೆ ಮಾಡಬೇಕು. ಮನೆ ನಿರ್ಮಾಣಕ್ಕೆ ರೇಶನ್ ಕಾರ್ಡ್/ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ದಾಖಲೆಗಳನ್ನಷ್ಟೇ ಕೇಳಬೇಕು. ಗ್ರಾಮ ಪಂಚಾಯತ್‌ನ ಪರವಾನಗಿ ಕಡ್ಡಾಯಗೊಳಿಸದೇ ನಿರಾಕ್ಷೇಪಣಾ ಪತ್ರವನ್ನು ಮಾತ್ರ ಪಡೆಯಬೇಕು. ಜೊತೆಗೆ ಭೂಪರಿವರ್ತನೆಯನ್ನು ಕಡ್ಡಾಯಗೊಳಿಸಬಾರದು ಎಂದು ಸಚಿವರು ನಿರ್ದೇಶಿಸಿದರು.

ಅಲೆಮಾರಿ ಕೋಶದಲ್ಲಿ ಈಗಾಗಲೇ ಆಯಾ ಜಿಲ್ಲಾಧಿಕಾರಿಗಳಿಂದ ಅನುಮೋದನೆಗೊಂಡಿರುವ ಪರಿಶಿಷ್ಟ ಜಾತಿಯ 1726 ಹಾಗೂ ಪರಿಶಿಷ್ಟ ಪಂಗಡದ 944 ಫಲಾನುಭವಿಗಳ ಪಟ್ಟಿಯನ್ನು ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಒದಗಿಸಲಾಗಿದೆ. ಈಗಾಗಲೇ ಪಟ್ಟಿಯಲ್ಲಿ ಸೇರದೇ ಇರುವ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ, ಅತೀ ಸೂಕ್ಷ್ಮಸಮುದಾಯಗಳಿಂದ ವಸತಿ ರಹಿತರಿಂದ ಆನ್‌ಲೈನ್ ಮತ್ತು ಆಫ್ ಲೈನ್‌ನಲ್ಲಿ ಅಲೆಮಾರಿ ಕೋಶದ ಮೂಲಕ ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆಯನ್ನು ಒಂದು ವಾರದೊಳಗೆ ಆರಂಭಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ರಾಜ್ಯದಲ್ಲಿರುವ ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿ ಅಲೆಮಾರಿ ಮತ್ತು ಅರೆ ಅಲೆಮಾರಿ ಪ.ಜಾತಿ ಫಲಾನುಭವಿಗಳಿಗೆ ಸುಮಾರು 300 ಕೋಟಿ ರೂ. ಹಾಗೂ ಪ.ಪಂಗಡದ ಫಲಾನುಭವಿಗಳಿಗೆ ಸುಮಾರು 65 ಕೋಟಿ ರೂ. ಅಗತ್ಯವಿದೆ. ಮುಂದಿನ ಬಜೆಟ್‌ನಲ್ಲಿ ಈ ಅನುದಾನವನ್ನು ನಿರೀಕ್ಷಿಸಬಹುದು ಎಂದ ಸಚಿವರು, ರಾಜ್ಯ ಅಲೆಮಾರಿ ಅನುಷ್ಠಾನ ಸಮಿತಿ ರಚಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಇದೇ ಸಂದರ್ಭದಲ್ಲಿ ಅಲೆಮಾರಿ ಸಮುದಾಯಗಳ ಒಕ್ಕೂಟದವರು ಬೆಗ್ಗರ್ಸ್ ಕಾಲೊನಿಯಲ್ಲಿ 5 ಎಕರೆ ಜಾಗವನ್ನು ಅಲೆಮಾರಿಗಳಿಗೆ ಮೀಸಲಿಡುವ ಬಗ್ಗೆ ಮಾಡಿದ ಮನವಿಯನ್ನು ಪರಿಶೀಲಿಸಿ, ಮುಂದಿನ ಕ್ರಮಕ್ಕೆ ತೀರ್ಮಾನ ಮಾಡುವುದಾಗಿ ತಿಳಿಸಿದರು.

ಸಭೆಯಲ್ಲಿ ಅಲೆಮಾರಿ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು, ಸಮಾಜ ಕಲ್ಯಾಣ ಅಪರ ಮುಖ್ಯಕಾರ್ಯದರ್ಶಿ ಎನ್. ನಾಗಾಂಬಿಕಾ ದೇವಿ, ನಿವೃತ್ತ ಐಎಎಸ್ ಅಧಿಕಾರಿ ವೆಂಕಟಯ್ಯ, ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!