Monday, July 4, 2022

Latest Posts

ರಾ.ಸ್ವ. ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆಯವರ ಮಾತುಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:
“ಭಾರತವು ಈ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿದೆ. ವೀರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ- ಬಲಿದಾನ, ದೇಶಕ್ಕಾಗಿ ಸಮರ್ಪಿಸಿಕೊಳ್ಳುವ ಮನೋಭಾವ, ಐತಿಹಾಸಿಕ ಹೋರಾಟಗಳ ಫಲವಾಗಿ ನಾವು ಸ್ವಾತಂತ್ರ್ಯವನ್ನು ಪಡೆದಿದ್ದೇವೆ. ನಮ್ಮ ಸ್ವಾತಂತ್ರ್ಯ ಹೋರಾಟದ ಅತಿದೊಡ್ಡ ವೈಶಿಷ್ಟ್ಯವೇನೆಂದರೆ ಅದು ಕೇವಲ ರಾಜಕೀಯ ಹೋರಾಟ ಮಾತ್ರವೇ ಆಗಿರಲಿಲ್ಲ, ಸಮಾಜದ ಎಲ್ಲಾ ಸ್ತರಗಳ ಜನರ ಭಾಗವಹಿಸುವಿಕೆಯೊಂದಿಗೆ ಅದೊಂದು ಸಾಮಾಜಿಕ-ಸಾಂಸ್ಕೃತಿಕ ಚಳುವಳಿಯಾಗಿ ರೂಪುತಾಳಿತ್ತು. ರಾಷ್ಟ್ರೀಯ ಸ್ವಾಭಿಮಾನವನ್ನು ಮುನ್ನೆಲೆಗೆ ತರುವ ಪ್ರಯತ್ನಗಳ ಮುಂದುವರಿಕೆಯಾಗಿ ಸ್ವಾತಂತ್ರ್ಯ ಚಳುವಳಿಯನ್ನು ನೋಡುವುದು ಸೂಕ್ತ” ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಅಭಿಪ್ರಾಯ ಪಟ್ಟಿದ್ದಾರೆ.
ಗುಜರಾತ್‌ ನ ಕರ್ಣಾವತಿಯಲ್ಲಿ ನಡೆಯುತ್ತಿರುವ ಆರೆಸ್ಸೆಸ್‌ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಮಾತನಾಡಿದ ಅವರು, “ಭಾರತದ ಮೇಲೆ ವಸಾಹತುಶಾಹಿಗಳ ಆಕ್ರಮಣದ ಉದ್ದೇಶ ಕೇವಲ ವ್ಯಾಪಾರ ಹಿತಾಸಕ್ತಿಗಳು ಮಾತ್ರವೇ ಆಗಿರಲಿಲ್ಲ, ಭಾರತವನ್ನು ರಾಜಕೀಯವಾಗಿ ಹಿಡಿತದಲ್ಲಿಟ್ಟುಕೊಳ್ಳುವ ಮೂಲಕ ಧಾರ್ಮಿಕ ಗುಲಾಮಗಿರಿ ಹೇರುವ ಗುರಿಗಳು ಅವರದ್ದಾಗಿದ್ದವು. ಭಾರತೀಯರ ಏಕತೆಯನ್ನು ನಾಶಗೊಳಿಸುವ ಮೂಲಕ ಮಾತೃಭೂಮಿಯೊಂದಿಗೆ ಅವರು ಹೊಂದಿರುವ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸಂಬಂಧಗಳನ್ನು ನಾಶಗೊಳಿಸಲು ಬ್ರಿಟೀಶರು ಸಂಚು ರೂಪಿಸಿದ್ದರು. ಈ ಉದ್ದೇಶದ ಭಾಗವಾಗಿಯೇ ಅವರು ಭಾರತದ ಸಂಸ್ಕೃತಿ, ಜನರ ನಂಬುಗೆ ಮತ್ತು ಶಿಕ್ಷಣ ವ್ಯವಸ್ಥೆಗಳ ಮೇಲೆ ದಾಳಿ ಮಾಡಿದರು.”
“ಆದರೆ ಬ್ರಿಟೀಷರ ಸಂಚುಗಳಿಗೆ ಭಾರತದ ರಾಷ್ಟ್ರೀಯ ಆಂದೋಲನ ಪ್ರತಿರೋಧ ಒಡ್ಡಿತು. ಅದೊಂದು ನೆಲಮೂಲದ ಹೋರಾಟವಾಗಿತ್ತು. ಆ ಕಾರಣದಿಂದಲೇ ಇಡೀ ಭಾರತವನ್ನು ಬಹುಬೇಗ ಆವರಿಸಿಕೊಂಡಿತು. ಸ್ವಾಮಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ, ಮಹರ್ಷಿ ಅರಬಿಂದೋ ಘೋಷ್‌ ಮೊದಲಾದ ಮಹಾನ್ ಆಧ್ಯಾತ್ಮಿಕ ನಾಯಕರು ಸಾಂಸ್ಕೃತಿಕ ದಾಸ್ಯ ಹೇರುವ ಬ್ರಿಟೀಷರ ಪ್ರಯತ್ನಗಳಿಗೆ ಪ್ರತಿರೋಧ ಒಡ್ಡಲು ಭಾರತದ ಜನರು ಮತ್ತು ನಾಯಕರನ್ನು ಪ್ರೇರೇಪಿಸಿದರು. ಈ ಆಂದೋಲನವು ಬುಡಕಟ್ಟು ಸಮುದಾಯಗಳು ಮತ್ತು ಮಹಿಳೆಯರಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯ ಪ್ರಜ್ಞೆಯನ್ನು ಬಿತ್ತಿ ಸ್ವಾತಂತ್ರ್ಯ ಭಾವನೆಯನ್ನು ಜಾಗೃತಗೊಳಿಸಿತು.
ಲಾಲ ಲಜಪತ್‌ ರಾಯ್‌, ತಿಲಕ್‌, ಬಿಪಿನ್‌ ಚಂದ್ರಪಾಲ್, ಮಹಾತ್ಮಾ ಗಾಂಧಿ, ವೀರ್ ಸಾವರ್ಕರ್, ನೇತಾಜಿ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ವೇಲು ನಾಚಿಯಾರ್ ಮೊದಲಾದ ಸ್ವಾತಂತ್ರ್ಯ ಸೇನಾನಿಗಳು ಜನರ ಸ್ವಾಭಿಮಾನ ಮತ್ತು ರಾಷ್ಟ್ರೀಯತೆಯ ಭಾವನೆಯನ್ನು ಮತ್ತಷ್ಟು ಬಲಪಡಿಸಿದರು. ಕಟ್ಟಾ ದೇಶಭಕ್ತ ಡಾ.ಹೆಡಗೇವಾರ್ ಅವರ ನೇತೃತ್ವದಲ್ಲಿ ಸ್ವಯಂಸೇವಕರು ದೇಶ ರಕ್ಷಣೆಯಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಿದರು ಎಂದು ಅವರು ಹೇಳಿದರು.”
“ಹಲವಾರು ಅಡೆತಡೆಗಳ ನಡುವೆಯೂ ಭಾರತ ವಿವಿಧ ಕ್ಷೇತ್ರಗಳಲ್ಲಿ ಶ್ಲಾಘನೀಯ ಪ್ರಗತಿ ಸಾಧಿಸಿರುವುದು ಸಂತಸದ ಸಂಗತಿಯಾದರೂ ದೇಶವನ್ನು ಸಂಪೂರ್ಣ ಸ್ವಾವಲಂಬಿಯಾಗಿಸುವ ಗುರಿ ಇನ್ನೂ ಈಡೇರಿಲ್ಲ ಎಂಬುದೂ ಸತ್ಯ. ಆದರೆ ಇದೀಗ ಭಾರತವು ಮಹನೀಯರು ತೋರಿಸಿಕೊಟ್ಟ ದಾರ್ಶನಿಕ ಹಾದಿಯಲ್ಲಿ ಸಾಗಲು ಸಿದ್ಧವಾಗುತ್ತಿದೆ. ಈ ಮಹತ್ತರವಾದ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರು ತೊಡಗಿಸಿಕೊಳ್ಳುವ ಮೂಲಕ ಭಾರತವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಬೇಕು. ದೇಶಿ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಭಾರತವನ್ನು ಜ್ಞಾನ ಶ್ರೀಮಂತ ಸಮಾಜವಾಗಿ ರೂಪಿಸಬೇಕು. ಭಾರತ ವಿಶ್ವಗುರುವಿನ ಪಾತ್ರವನ್ನು ವಹಿಸುವ ನಿಟ್ಟಿನೆಡೆಗೆ ಕೊಂಡೊಯ್ಯಬೇಕು” ಎಂದರು.
“ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಶುಭಸಂದರ್ಭದಲ್ಲಿ ಜನರು ತಮ್ಮ ನೆಲಮೂಲದ ಸಂಸ್ಕೃತಿಗಳೊಂದಿಗೆ ಬೆಸೆದುಕೊಳ್ಳುವ, ರಾಷ್ಟ್ರೀಯ ಏಕೀಕರಣದ ಮನೋಭಾವ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನು ಇರಿಸಬೇಕು” ಎಂದು ಅವರು ಕರೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss