ಸಿದ್ದರಾಮಯ್ಯ ಅವರಿಂದ ಹತಾಶೆಯ ಹೇಳಿಕೆ: ಕೃಷಿ ಸಚಿವ ಬಿ.ಸಿ.ಪಾಟೀಲ್

ಹೊಸದಿಗಂತ ವರದಿ,ಚಿತ್ರದುರ್ಗ:

ಸಿದ್ದರಾಮಯ್ಯ ಹತಾಶರಾಗಿದ್ದಾರೆ, ನೆಲೆ ಕಳೆದುಕೊಂಡ ಭಾವನೆ ಅವರಲ್ಲಿದೆ. ಹೀಗಾಗಿ ಮನಸ್ಸಿಗೆ ಬಂದಂತೆ ನಾಲಿಗೆ ಮೇಲೆ ಹತೋಟಿ ಇಲ್ಲದೆ ಮಾತನಾಡುತ್ತಿದ್ದಾರೆ. ಇದು ಕಾಂಗ್ರೆಸ್‌ಗೆ ಮಾರಕವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಹಾಗೂ ನಾವು ನಮ್ಮ ಕೆಲಸ ಮಾತ್ರ ಮಾಡುತ್ತಿದ್ದೇವೆ ಆದರೆ ಕಾಂಗ್ರೆಸ್‌ನವರು ವಿವಾದ ಉಂಟು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಉತ್ತಮ ಆಡಳಿತ ಸಹಿಸಲು ಆಗದೆ ಅನಾವಶ್ಯಕ ವಿವಾದ ಸೃಷ್ಠಿ ಮಾಡುತ್ತಿದ್ದಾರೆ. ವಿವಾದಗಳ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತರುವ ಸಣ್ಣತನ ನಮಗಿಲ್ಲ. ಬಿಜೆಪಿ ತತ್ವ ಸಿದ್ದಾಂತ ಆಡಳಿತ ವೈಖರಿ ಇಟ್ಟುಕೊಂಡು ಚುನಾವಣೆಗೆ ಹೋಗುತ್ತದೆ ಎಂದರು.
ಡಿಕೆಶಿ, ಸಿದ್ದರಾಮಯ್ಯ ನಡುವಿನ ಕಂದಕ ಹೆಚ್ಚುತ್ತಿದೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಡಿಕೆಶಿ ತಾನೇ ಸಿಎಂ ಆಗಬೇಕೆಂದು ಕನಸು ಕಾಣುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹತಾಶೆಯಿಂದ ಮನಸೋ ಇಚ್ಛೆ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಂದಲೇ ಹಿಜಾಬ್ ಗೊಂದಲ ಸೃಷ್ಠಿ. ದೇಶದ ಇತಿಹಾಸ ಹೇಳುವ ಕಾಶ್ಮೀರ ಫೈಲ್ ಸಿನೆಮಾ ಕಂಡೆಮ್ ಮಾಡುವುದು ಸರಿಯಲ್ಲ ಎಂದರು.
ಹತಾಶೆ, ಮುಳುಗುವ ಭೀತಿಯಲ್ಲಿ ಮನಬಂದಂತೆ ಮಾತನಾಡುವುದು, ಜಾತಿ, ಜನಾಂಗ, ಧರ್ಮ ತೆಗೆಳುವುದು ಸರಿಯಲ್ಲ. ಬೇರೊಬ್ಬರಿಗೆ ನೋವಾಗುವಂತಹ ಹೇಳಿಕೆ ಸರಿಯಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದವರು, ತೂಕವಾಗಿ ಮಾತಾಡಬೇಕು. ಅವರ ಮಾತುಗಳು ಅವರಿಗೇ ಮಾರಕ ಆಗಲಿವೆ ಎಂದು ಹೇಳಿದರು.
ಯಾವುದೇ ಸಿನಿಮಾ ತೆಗೆದು ಬೇರೆ ಸಿನಿಮಾ ಹಾಕಲು ಯಾರೂ ಹೇಳಿಲ್ಲ. ಪ್ರೇಕ್ಷಕರ ಬೇಡಿಕೆಯಂತೆ ಥಿಯೇಟರ್‌ಗಳಲ್ಲಿ ಸಿನಿಮಾ ಬದಲಾಗುತ್ತವೆ. ಕಾಶ್ಮೀರ ಫೈಲ್ಸ್ ಸಿನೆಮಾ ಮೊದಲ ಮೂರು ದಿನ ಯಾರೂ ನೋಡಲಿಲ್ಲ. ಬಳಿಕ ಜನ ಥಿಯೇಟರ್‌ಗಳಲ್ಲಿ ಕಿಕ್ಕಿರಿದು ನೋಡುತ್ತಿದ್ದಾರೆ. ಜೇಮ್ಸ್ ಸಿನಿಮಾ ಹೆಸರಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಇತಿಹಾಸ ಕುರಿತು ಬೆಳಕು ಚಲ್ಲುವುದು ತಪ್ಪಲ್ಲ. ಅಂಬೇಡ್ಕರ್, ವಾಲ್ಮೀಕಿ ಯಾವುದೇ ಫೈಲ್ ಮಾಡಿದರೂ ತಪ್ಪಲ್ಲ. ಸತ್ಯವನ್ನಷ್ಟೆ ಜನರಿಗೆ ಹೇಳಬೇಕು. ಇದಕ್ಕೆ ಸತೀಶ್ ಜಾರಕಿ ಹೊಳಿ ವಕಾಲತ್ತು ಅಗತ್ಯವಿಲ್ಲ ಎಂದರು.
ಸಚಿವ ಸಂಪುಟ ವಿಸ್ತರಣೆಗೆ ನಾಲ್ಕು ಸ್ಥಾನಗಳು ಖಾಲಿ ಇದೆ. ಸ್ಥಾನ ತುಂಬುವ ಕೆಲಸವನ್ನು ಸಿಎಂ ಮತ್ತು ವರಿಷ್ಠರು ಮಾಡುತ್ತಾರೆ. ಶೀಘ್ರದಲ್ಲಿಯೇ ಎಲ್ಲಾ ಸ್ಥಾನಗಳು ತುಂಬಲಿವೆ. ಚುನಾವಣೆಗೆ ಇನ್ನು ೧೪ ತಿಂಗಳು ಬಾಕಿ ಇದ್ದು, ಸಚಿವ ಸ್ಥಾನ ಭರ್ತಿ ಮಾಡುತ್ತಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!