ರಾಜ್ಯದಲ್ಲಿನ ಸರಣಿ ಕೊಲೆಗಳನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಎನ್.ರವಿಕುಮಾರ್

ಹೊಸದಿಗಂತ ವರದಿ,ಚಿತ್ರದುರ್ಗ: 
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಸರಣಿ ಕೊಲೆಗಳು ನಡೆಯುತ್ತಿವೆ. ಇದನ್ನು ವಿರೋಧಿಸಿ ಬಿಜೆಪಿ ವತಿಯಿಂದ ಸೋಮವಾರ ರಾತ್ರಿ ಮತ್ತು ಮಂಗಳವಾರ ರಾಜ್ಯಾದ್ಯಂತಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ವಿಧಾನ ಪರಿಷತ್ ಮುಖ್ಯಸಚೇತಕ ಎನ್.ರವಿಕುಮಾರ್ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂ ಸಮಾಜಕ್ಕೆ ಸೇರಿದ ದಲಿತರು, ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ತಮ್ಮ ಧಾರ್ಮಿಕ ಆಚರಣೆಗಳನ್ನು ಮಾಡಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಬಡವರು, ದುರ್ಬಲರು, ಅಮಾಯಕರನ್ನು ರಕ್ಷಿಸಬೇಕಾದ ಸರ್ಕಾರ ಇವರ ಬಗ್ಗೆ ನಿರ್ಲಕ್ಷೆ ಧೋರಣೆ ತಳೆಯುತ್ತಿದೆ. ಒಂದು ವೇಳೆ ಅಲ್ಪಸಂಖ್ಯಾತರಿಗೆ ಈ ರೀತಿ ಆಗಿದ್ದಲ್ಲಿ ಸಿದ್ದರಾಮಯ್ಯ ಹೇಗೆ ಮಾತನಾಡುತ್ತಿದ್ದರು. ಹೇಗೆ ವರ್ತಿಸುತ್ತಿದ್ದರು. ಇದೊಂದು ಲಜ್ಜೆಗೆಟ್ಟ ಸರ್ಕಾರ. ರಾಜ್ಯದ ಜನತೆಗೆ ರಕ್ಷಣೆ ಕೊಡಲು ಆಗದಿದ್ದಲ್ಲಿ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಯಾದಗಿರಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ರಾಕೇಶ್ ಎಂಬ ಯುವಕನನ್ನು ಮುಸ್ಲಿಂ ಸಮುದಾಯದ ಫಯಾಜ್ ಮತ್ತವನ ಸ್ನೇಹಿತರು ಸೇರಿ ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದಾರೆ. ರಾಕೇಶ್ ಊಟಕ್ಕೆ ರೊಟ್ಟಿ ತರಲು ಫಯಾಜ್‌ನ ಅಂಗಡಿಗೆ ಹೋಗಿದ್ದ. ರೊಟ್ಟಿ ಖಾಲಿಯಾಗಿದ್ದ ಕಾರಣ ಮನೆಗೆ ಬಂದು ಊಟ ಮಾಡಿ ತಂದೆ – ತಾಯಿಯ ಜೊತೆ ಮಲಗಿದ್ದ. ರಾತ್ರಿ ೧೦ ಗಂಟೆ ಸುಮಾರಿಗೆ ತನ್ನ ಸ್ನೇಹಿತರ ಜೊತೆ ರಾಕೇಶ್ ಮನೆ ಬಂದ ಫಯಾಜ್, ಬಾಗಿಲು ಬಡಿದು ರಾಕೇಶ್‌ನನ್ನು ಎಬ್ಬಿಸಿದ್ದಾನೆ. ಬಾಗಿಲು ತೆಗೆಯುತ್ತಿದ್ದಂತೆ ರಾಕೇಶ್ ಮುಖಕ್ಕೆ ಬಟ್ಟೆ ಹಾಕಿ ಆತನ ಪೋಷಕರೆದುರೇ ಹಲ್ಲೆ ನಡೆಸಲಾಗಿದೆ ಎಂದರು.

ರಾಕೇಶನ ಮರ್ಮಾಂಗ ಸೇರಿದಂತೆ ದೇಹದ ಸೂಕ್ಷ್ಮ ಭಾಗಗಳಿಗೆ ಹೊಡೆದು ಕೊಲೆ ಮಾಡಲಾಗಿದೆ. ರಾತ್ರಿ ೧೦ ಗಂಟೆಗೆ ಪ್ರಕರಣ ನಡೆದಿದ್ದರೂ ಮರುದಿನ ಮಧ್ಯಾಹ್ನ ೧ ಗಂಟೆವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಮೃತ ರಾಕೇಶನ ತಾಯಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಪ್ರತಿಭಟನೆ ನಡೆಸಿದಾಗ ಪೊಲೀಸರು ರಾಕೇಶ್‌ನನ್ನು ಕೊಂದವರ ವಿರುದ್ಧ ಎಫ್‌ಐಆರ್ ಹಾಕಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ರಾಮನವಮಿ ಆಚರಣೆ ದಿನ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜೈಶ್ರೀರಾಮ್ ಎಂದು ಘೋಷಣೆ ಕೂಗುವವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಹೆಣ್ಣುಮಕ್ಕಳನ್ನು ಹಾಡಹಗಲೇ ಕೊಲೆ ಮಾಡಲಾಗುತ್ತಿದೆ. ಹೊಟೇಲ್‌ನಲ್ಲಿ ಬಾಂಬ್ ಸ್ಫೋಟಿಸಲಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಎಂದು ಕೂಗಿದವರನ್ನು ರಕ್ಷಿಸುವ ಕೆಲಸವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕುಡುಚಿ ಮಾಜಿ ಶಾಸಕ ಪಿ.ರಾಜೀವ್ ಮಾತನಾಡಿ, ರಾಜ್ಯದಲ್ಲಿ ಕೇವಲ ಮೂರು ದಿನಗಳಲ್ಲಿ ಎಂಟು ಬರ್ಬರ ಹತ್ಯೆಗಳು ನಡೆದಿವೆ. ಮಹಿಳೆಯನ್ನು ವಿವಸ್ತ್ರಗೊಳಿಸುವುದು, ಸಾಮೂಹಿಕ ಅತ್ಯಾಚಾರ, ಪ್ರೀತಿ ನಿರಾಕರಿಸಿದವರನ್ನು ಚುಚ್ಚಿ ಕೊಲ್ಲುವುದು, ಪಾಕಿಸ್ತಾನದ ಪರಘೋಷಣೆ ಕೂಗುವುದು, ಹನುಮಾಲ್ ಚಾಲೀಸ ಹಾಕಿದವರ ಮೇಲೆ ಹಲ್ಲೆ ಮಾಡುವುದು. ಹೀಗೆ ಸಾಲು ಸಾಲು ಪ್ರಕರಣಗಳು ನಡೆಯುತ್ತಿವೆ. ರಾಜ್ಯದಲ್ಲಿ ಇಂತಹ ತಾಲಿಬಾನ್ ಸರ್ಕಾರ ತಂದ ಕಾಗ್ರೇಸ್‌ನವರಿಗೆ ಸ್ರಾಷ್ಟಾಂಗ ನಮಸ್ಕಾರ ಎಂದು ಕುಟುಕಿದರು.

ಯಾದಗಿರಿಯಲ್ಲಿ ಭಾನುವಾರ ರಾತ್ರಿ ರಾಕೇಶ್ ಹತ್ಯೆಯಾಗಿದೆ. ಆದರೆ ಪೊಲೀಸರು ಸೋಮವಾರ ಮಧ್ಯಾಹ್ನ ೧ ಗಂಟೆಯವರೆಗೂ ಎಫ್‌ಐಆರ್ ದಾಖಲಿಸಿಲ್ಲ. ದಲಿತ ಯುವಕನ ಹತ್ಯೆಯಾದರೆ ಈ ಕುರಿತು ಕ್ರಮ ಕೈಗೊಳ್ಳಲು ಇಷ್ಟು ತಡ ಮಾಡುವುದು ಎಷ್ಟರಮಟ್ಟಿಗೆ ಸರಿ. ಚಿತ್ರದುರ್ಗ ನಗರದಲ್ಲೂ ತನ್ನ ಸಹೋದ್ಯೋಗಿ ಮುಸ್ಲಿಂ ಯುವತಿಗೆ ಬೈಕ್‌ನಲ್ಲಿ ಡ್ರಾಪ್ ಮಾಡಿದ ಉಮೇಶ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ರಾಜ್ಯದಲ್ಲಿ ನಾಲಾಯಕ್ ಗೃಹಮಂತ್ರಿ ಇದ್ದಾರೆ. ಅವರಿಂದ ಅವರ ಸರ್ಕಾರದಿಂದ ದಲಿತರಿಗೆ, ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಸಿ. ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ತಿಪ್ಪೇಸ್ವಾಮಿ, ತಾ.ಪಂ. ಮಾಜಿ ಸದಸ್ಯ ಸುರೇಶ್‌ನಾಯ್ಕ್, ಮೋಹನ್, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!