ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾರೆ ನಿಕೃಷ್ಟ ಮುಖ್ಯಮಂತ್ರಿ, ಅಪ್ರಬುದ್ಧ ಗೃಹಸಚಿವ: ಮಾಜಿ ಶಾಸಕ ಪಿ.ರಾಜೀವ್

ಹೊಸದಿಗಂತ ವರದಿ,ಚಿತ್ರದುರ್ಗ:
ರಾಜ್ಯದಲ್ಲಿ ನಿಕೃಷ್ಟ ಮುಖ್ಯಮಂತ್ರಿ, ಅಪ್ರಬುದ್ಧ ಗೃಹಸಚಿವರು ಆಡಳಿತ ನಡೆಸುತ್ತಿರುವುದು ರಾಜ್ಯದ ಜನತೆಯ ದೌರ್ಭಾಗ್ಯ ಎಂದು ಕುಡುಚಿ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ವಿಷಾದ ವ್ಯಕ್ತಪಡಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದರ ಪರಿಣಾಮವಾಗಿ ಹಾಡ ಹಗಲೇ ಹೆಣ್ಣುಮಕ್ಕಳನ್ನು ಕೊಲೆ ಮಾಡಲಾಗುತ್ತಿದೆ. ಬಾಂಬ್ ಸ್ಫೋಟ ಮಾಡಿದವರು, ದೇಶ ವಿರೋಧಿ ಘೋಷಣೆ ಕೂಗಿದವರು, ನೇಹಾ ಹಿರೇಮಠ ಅವರ ಕೊಲೆ ಮಾಡಿದವರನ್ನು ರಕ್ಷಿಸಲು ಮುಖ್ಯಮಂತ್ರಿ ಹಾಗೂ ಗೃಹಮಂತರಿ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ವಿರುದ್ಧ ವಾಟ್ಸಾಪ್‌ನಲ್ಲಿ ಕಮೆಂಟ್ ಮಾಡಿದವರನ್ನು ಬಂಧಿಸಿ ನ್ಯಾಯಾಂಗ ಬಂದನಕ್ಕೆ ಕಳಿಸಲಾಗಿದೆ. ಆದರೆ ಕೊಲೆ ಮಾಡಿದವರ, ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ಯಾವುದೇ ಕ್ರಮ ಜರುಗಿಸುವುದಿಲ್ಲ. ಬದಲಾಗಿ ಅವರು ಆ ರೀತಿಯ ಘೋಷಣೆ ಕೂಗಿಲ್ಲ ಎಂದು ಮುಖ್ಯಮಂತ್ರಿ, ಗೃಹಮಂತ್ರಿಗಳೇ ಸಮರ್ಥನೆ ಮಾಡಿಕೊಳ್ಳುತ್ತಾರೆ. ಇಂಥವರಿಗೆ ಈ ಬಾಆರಿಯ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಬೇಕು ಎಂದರು.

ರಾಜ್ಯದಲ್ಲಿ ದಲಿತರ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ. ಮೊದಲ ವರ್ಷ ೧೧ ಸಾವಿರ ಕೋಟಿ, ಎರಡನೇ ವರ್ಷ ೧೪ ಸಾವಿರ ಕೋಟಿ ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದಿಂದ ೩೭,೦೦೦ ಕೋಟಿ ಬರಬೇಕೆಂದು ಹೇಳಿದ್ದರು. ಈಗ ೩೭,೬೦೦ ಕೋಟಿ ರೂ ಬಂದಿದೆ. ಆದಾಗ್ಯೂ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಲಾಗುತ್ತಿದೆ. ಇದು ಈ ನಾಡಿನ ದುರಂತ ಎಂದು ವಾಗ್ದಾಳಿ ನಡೆಸಿದರು.

ಕೃಷಿಗೆ ಮೀಸಲಿಡಬೇಕಾದ ಹಣವನ್ನು ೭೫೦೦ ಕೋಟಿಯಿಂದ ೪೫೦೦ ಕೋಟಿಗೆ ಇಳಕೆ ಮಾಡಲಾಗಿದೆ. ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ ೪೦೦೦ ರೂ. ನಿಲ್ಲಿಸಲಾಗಿದೆ. ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹಧನ ನೀಡಿಲ್ಲ. ಆಸ್ಪತ್ರೆಗಳಲ್ಲಿ ಸಮರ್ಪಕ ಔಷಧಿಗಳು ದೊರೆಯುತ್ತಿಲ್ಲ. ರಾಜ್ಯದ ಜನ ಸಂಕಷ್ಟ ಅನುಭವಿಸುವಂತಾಗಿದೆ. ರಾಜ್ಯ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ಚೊಂಬು ನೀಡಿದೆ ಎಂದು ಆಕ್ರೋ ವ್ಯಕ್ತಪಡಿಸಿದರು.

ಬಂಜಾರ ಸಮುದಾಯಕ್ಕೆ ಬಿಜೆಪಿ ನೀಡಿದ್ದ ಶೇಕಡಾ ೪.೫ ರಷ್ಟು ಮೀಸಲಾತಿಯನ್ನು ೩ಕ್ಕೆ ಇಳಿಸಲಾಗಿದೆ. ರಾಜ್ಯದಲ್ಲಿ ಒಬ್ಬರೂ ಬಂಜಾರ ಸಮುದಾಯದ ಸಚಿವರಿಲ್ಲ. ಲೋಕಸಭಾ ಚುನಾವಣೆಗೆ ಬಂಜಾರ ಜನಾಂಗದ ಯಾವುದೇ ವ್ಯಕ್ತಿಗೆ ಟಿಕೇಟ್ ನೀಡಿಲ್ಲ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಂಜಾರ ಸಮುದಾಯ ಬಿಜೆಪಿಗೆ ಬೆಂಬಲ ನೀಡಲಿದೆ ಹಾಗಾಗಿ ರಾಜ್ಯ ಎಲ್ಲ ೨೮ ಕ್ಷೇತ್ರಗಳಲ್ಲಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಗರಿಬೊಮ್ಮನಹಳಿ ಜೆಡಿಎಸ್ ಶಾಸಕ ನೇಮಿರಾಜ ನಾಯ್ಕ, ಮಾಯಕೊಂಡ ಕ್ಷೇತ್ರದ ಬಸವರಾಜನಾಯ್ಕ, ಶಂಕರನಾಯ್ಕ ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!