May 27, 2026
Wednesday, May 27, 2026
spot_img

ರಾಜ್ಯಾದ್ಯಂತ ವರುಣನ ರೌದ್ರನರ್ತನ: ಬೆಂಗಳೂರಿನಲ್ಲಿ ಮೆಟ್ರೋ, ವಿಮಾನ ಸಂಚಾರ ಸಂಪೂರ್ಣ ಏರುಪೇರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ತೀವ್ರಗೊಂಡಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಹಾನಿ ಸಂಭವಿಸಿದೆ. ಬಿರುಗಾಳಿ, ಸಿಡಿಲು ಮತ್ತು ಆಲಿಕಲ್ಲು ಮಳೆಯ ಆರ್ಭಟಕ್ಕೆ ರಸ್ತೆಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳು ಜಖಂಗೊಂಡಿವೆ.

ಬೆಂಗಳೂರಿನಲ್ಲಿ ಮಳೆಯ ರೌದ್ರನರ್ತನ
ಮದ್ಯಾಹ್ನದ ನಂತರ ಸುರಿದ ಭಾರಿ ಗುಡುಗು ಸಹಿತ ಮಳೆಗೆ ನಮ್ಮ ಮೆಟ್ರೋ ಹಳಿಗಳ ಮೇಲೆ ಮರಗಳು ಮುರಿದು ಬಿದ್ದಿದ್ದರಿಂದ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಕೆಲಕಾಲ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ನೂರಾರು ಮರಗಳು ಹಾಗೂ ಇಂಧನ ಇಲಾಖೆಯ ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದಾಗಿ ಹಲವು ಬಡಾವಣೆಗಳಲ್ಲಿ ಗಂಟೆಗಟ್ಟಲೆ ಕತ್ತಲೆ ಆವರಿಸಿತ್ತು. ದಿಢೀರ್ ಪ್ರವಾಹದಂತೆ ರಸ್ತೆಗಳ ಮೇಲೆ ನೀರು ಹರಿದಿದ್ದರಿಂದ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು.

ಇನ್ನು ಮಳೆ ಆರ್ಭಟಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಏರುಪೇರಾಗಿದ್ದು, ರನ್‌ವೇ ಕಾಣಿಸದ ಕಾರಣ ಹಲವು ವಿಮಾನಗಳನ್ನು ಚೆನ್ನೈಗೆ ಡೈವರ್ಟ್ ಮಾಡಲಾಗಿದೆ. ಇತ್ತ ರಸ್ತೆಗಳಲ್ಲಿ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಗಿರುವುದರಿಂದ ಕ್ಯಾಬ್‌ಗಳು ಸಿಗದೆ ಪ್ರಯಾಣಿಕರು ಗಂಟೆಗಟ್ಟಲೆ ಪರದಾಡುವಂತಾಗಿದೆ.

ಬೀದರ್‌ನಲ್ಲಿ ಆರು ವರ್ಷದ ಕಂದಮ್ಮ ಬಲಿ:
ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ತಹಶೀಲ್ದಾರ್ ಕಚೇರಿ ಬಳಿಯಿರುವ ಬಡಾವಣೆಯಲ್ಲಿ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯ ಆರ್ಭಟಕ್ಕೆ ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದಿದೆ. ಮೇಲ್ಛಾವಣಿ ಮೇಲಿದ್ದ ಭಾರವಾದ ಕಲ್ಲುಗಳು ನೇರವಾಗಿ ಮನೆಯೊಳಗೆ ಬಿದ್ದ ಪರಿಣಾಮ, 6 ವರ್ಷದ ಬಾಲಕಿ ಮಾಹೇರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಕೃಷಿ ವಲಯಕ್ಕೆ ಭಾರಿ ಹೊಡೆತ
ಉತ್ತರ ಕರ್ನಾಟಕ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ದಿಢೀರ್ ಸುರಿದ ಆಲಿಕಲ್ಲು ಮಳೆಗೆ ಮಾವು, ಬಾಳೆ ಹಾಗೂ ತರಕಾರಿ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಹವಾಮಾನ ಇಲಾಖೆ ಮುನ್ಸೂಚನೆ
ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು, ಮಂಡ್ಯ, ದಾವಣಗೆರೆ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಮುಂದಿನ 2-3 ದಿನಗಳ ಕಾಲ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮರಗಳ ಕೆಳಗೆ ನಿಲ್ಲದಂತೆ ಎಚ್ಚರಿಕೆ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !