Monday, October 2, 2023

Latest Posts

ನಾಳೆಯಿಂದ ರಾಜ್ಯಾದ್ಯಂತ ಶಾಲೆ ಆರಂಭ: ಸೇತುಬಂಧ ಕಾರ್ಯಕ್ರಮಕ್ಕೆ ಸೂಚನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮೇ 31ರಂದು ಎಲ್ಲಾ ಸರ್ಕಾರಿ ಶಾಲೆಗಳು ಪ್ರಾರಂಭವಾಗಲಿದ್ದು, ಶಾಲೆಗಳ ಆರಂಭಕ್ಕೆ ಸಕಲ ಸಿದ್ದತೆಗಳ ಮಾಡಿಕೊಳ್ಳಲಾಗಿದೆ. 1 ರಿಂದ 10ನೇ ತರಗತಿವರೆಗೂ ಶಾಲಾರಂಭದಿಂದಲೇ ಸೇತುಬಂಧ ಕಾರ್ಯಕ್ರಮ ನಡೆಸಲು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.

ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು 62, 229 ಶಾಲೆಗಳು ರಾಜ್ಯದಲ್ಲಿವೆ. ಇದರಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳ ಪ್ರಮಾಣ 25, 278, ಹಿರಿಯ ಪ್ರಾಥಮಿಕ ಶಾಲೆಗಳ ಪ್ರಮಾಣ 36, 951 ಹಾಗೂ 15, 867 ಮಾಧ್ಯಮಿಕ ಶಾಲೆಗಳಿವೆ. ಎಲ್ಲ ಶಾಲೆಗಳು ನಾಳೆಯಿಂದ ಆರಂಭಗೊಳ್ಳಲಿವೆ.

ನಾಳೆಯಿಂದ ಸರ್ಕಾರಿ ಶಾಲೆಗಳಲ್ಲಿ ತರಗತಿ ಚಟುವಟಿಕೆಗಳ ಆರಂಭಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡಿದ್ದು, ಶಾಲೆಗಳು ಆರಂಭವಾಗುತ್ತಿದ್ದಂತೆ 1 ರಿಂದ 3ನೇ ತರಗತಿಗೆ ಆರಂಭದ 30 ದಿನಗಳು ಹಾಗೂ 4ರಿಂದ 10ನೇ ತರಗತಿ ಮಕ್ಕಳಿಗೆ 15 ದಿನಗಳ ಕಾಲ ಸೇತುಬಂಧ ಕಾರ್ಯಕ್ರಮ ನಡೆಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಎಲ್ಲ ಶಾಲೆಗಳಿಗೆ ಸೂಚನೇ ನೀಡಿದೆ.

ಮಕ್ಕಳಲ್ಲಿನ ಕಲಿಕಾ ಅಂತರ ತಗ್ಗಿಸಲು ಸೇತುಬಂಧವನ್ನು ಸರ್ಕಾರ ಹಮ್ಮಿಕೊಂಡಿದ್ದು, 1 ರಿಂದ 10ನೇ ತರಗತಿಗಳಿಗೆ ಸೇತುಬಂಧ ಶಿಕ್ಷಣದ ಸಾಹಿತ್ಯ ಮತ್ತು ವಿನ್ಯಾಸವನ್ನು ಸಿದ್ಧಪಡಿಸಿ ವೆಬ್​ಸೈಟ್​ನಲ್ಲಿ ಅಪ್ಲೋಡ್​ ಮಾಡಲಾಗಿದೆ. ಶಾಲಾ ಹಂತದಲ್ಲಿ ಸೇತುಬಂಧ ಶಿಕ್ಷಣವನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗುವಂತೆ ಹಾಗೂ ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಗಾಗಿ ಈ ಸಾಹಿತ್ಯ ಸಿದ್ಧಪಡಿಸಿದೆ. ಮಕ್ಕಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾ ಮಟ್ಟ ಹಾಗೂ ಸಾಮರ್ಥ್ಯ ಗುರುತಿಸಿ ಮುಂದಿನ ಕಲಿಕೆಗೆ ಸಿದ್ಧಗೊಳಿಸಲು ಕಲಿತಿರುವ ಮತ್ತು ಕಲಿಯುತ್ತಿರುವ ಪರಿಕಲ್ಪನೆಗಳ ಅಂತರದ ನಡುವೆ ಸಂಬಂಧ ಕಲ್ಪಿಸುವುದು ಸೇತು ಬಂಧ ಶಿಕ್ಷಣದ ಉದ್ದೇಶವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!