ಗಣರಾಜ್ಯೋತ್ಸವದ ಪರೇಡ್ ನಲ್ಲಿ ತುಳಸಿ ಗೌಡರ ಪ್ರತಿಮೆ ಪ್ರದರ್ಶನ!

ಹೊಸದಿಗಂತ ವರದಿ,ಅಂಕೋಲಾ:

ಗಣರಾಜ್ಯೋತ್ಸವದ ದಿನದಂದು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಕರ್ನಾಟಕ ರಾಜ್ಯದಿಂದ ಪ್ರದರ್ಶಿಸಲ್ಪಡುವ ಸ್ಥಬ್ದ ಚಿತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೃಕ್ಷಮಾತೆ ಅಂಕೋಲಾ ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ ಅವರ ಪ್ರತಿಮೆ ಪ್ರದರ್ಶನಗೊಳ್ಳಲಿದೆ.

ನಾರಿಶಕ್ತಿ ಥೀಮ್ ಹೆಸರಿನಲ್ಲಿ ಪ್ರದರ್ಶನಗೊಳ್ಳಲಿರುವ ರಾಜ್ಯದ ಸ್ಥಬ್ದ ಚಿತ್ರದಲ್ಲಿ ಸುಮಾರು 8 ಸಾವಿರ ಗಿಡಗಳನ್ನು ನೆಟ್ಟು ಖ್ಯಾತಿ ಪಡೆದಿರುವ ತುಮಕೂರು ಗುಬ್ಬಿಯ ಪದ್ಮಶ್ರೀ ಸಾಲು ಮರದ ತಿಮ್ಮಕ್ಕ, ಸಹಸ್ರಾರು ಗಿಡಗಳನ್ನು ನೆಟ್ಟು ನೂರಾರು ಎಕರೆ ಅರಣ್ಯ ನಿರ್ಮಾಣ ಮಾಡಿರುವ ಅಂಕೋಲಾ ಹೊನ್ನಳ್ಳಿಯ ತುಳಸಿ ಗೌಡ ಮತ್ತು ಸುಮಾರು 2 ಸಾವಿರಕ್ಕೂ ಹೆಚ್ಚಿನ ಗರ್ಭಿಣಿಯರಿಗೆ ಉಚಿತವಾಗಿ ಸಾಂಪ್ರದಾಯಿಕ ಹೆರಿಗೆ ಮಾಡಿಸಿರುವ ಪಾವಗಡದ ಸೂಲಗಿತ್ತಿ ನರಸಮ್ಮ ಅವರ ಪ್ರತಿಮೆಗಳು ರಾಜ್ಯದ ಸ್ಥಬ್ದ ಚಿತ್ರದ ಭಾಗವಾಗಲಿದ್ದು ಪ್ರಥಮ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅಂಕೋಲಾ ಸುತ್ತ ಮುತ್ತಲಿನ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತದ ತಂಡ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪ್ರದರ್ಶನ ನೀಡಲಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರದ ನೂರಾರು ಗಣ್ಯರು ಪಥಸಂಚಲನ ವೀಕ್ಷಿಸಲಿದ್ದು ಉತ್ತರ ಕನ್ನಡ ಜಿಲ್ಲೆಯಿಂದ ತುಳಸಜ್ಜಿಯ ಪ್ರತಿಮೆ ಮತ್ತು ಸುಗ್ಗಿ ಕುಣಿತಕ್ಕೆ ಅವಕಾಶ ದೊರಕಿರುವುದು ಜಿಲ್ಲೆಯ ಜನರಲ್ಲಿ ಗಣರಾಜ್ಯೋತ್ಸವದ ಸಂಭ್ರಮ ಹೆಚ್ಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!