ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಕಾಕ್ರೋಚ್ ಜನತಾ ಪಾರ್ಟಿ ಕರೆ ನೀಡಿತ್ತು. ಆದರೆ ದೆಹಲಿ ಪೊಲೀಸರು ಈ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಾರೆ. ಶಾರ್ಟ್ ನೋಟಿಸ್ ನೀಡಲಾಗಿದೆ, ಹಿಂದಿನ ಪ್ರತಿಭಟನೆಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿತ್ತು ಹಾಗೂ ಕಾನೂನು ನಿರ್ದೇಶನಗಳನ್ನು ಪಾಲಿಸಿಲ್ಲ ಎಂಬ ಕಾರಣ ನೀಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಿಜೆಪಿ ಪ್ರತಿಭಟನೆಗೆ ಮೊದಲಿನಿಂದಲೂ ಬೆಂಬಲ ನೀಡುತ್ತಾ ಬಂದಿರುವ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್, ಕೇಂದ್ರ ಸರ್ಕಾರದ ಈ ಕ್ರಮದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ‘X’ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು, ತಮ್ಮ ಹಿಟ್ ಸಿನಿಮಾ ‘ಸಿಂಗಂ’ನಲ್ಲಿ ತಾವು ಮಾಡಿದ ವಿಲನ್ ‘ಜಯಕಾಂತ್ ಶಿಖ್ರೆ’ ಪಾತ್ರದ ಜನಪ್ರಿಯ ಡೈಲಾಗ್ ಬಳಸಿ ಚಾಟಿ ಬೀಸಿದ್ದಾರೆ.
ವೀಡಿಯೋದಲ್ಲಿ ಮಾತನಾಡಿರುವ ಪ್ರಕಾಶ್ ರಾಜ್, “ಮೊದಲು ಈ ದೇಶದ ನಾಗರಿಕರ ಮತದಾನದ ಹಕ್ಕನ್ನು ಕಸಿಯಲು ಯತ್ನಿಸಿದ್ರಿ. ಈಗ ಇಡೀ ದೇಶವೇ ಇದರ ವಿರುದ್ಧ ಸಿಡಿದೇಳುತ್ತಿರುವಾಗ, ಅವರ ಪ್ರತಿಭಟನೆಯ ಹಕ್ಕನ್ನು ಕಸಿಯೋಕೆ ಯತ್ನಿಸುತ್ತಿದ್ದೀರಿ! ರೈಲುಗಳನ್ನು ರದ್ದು ಮಾಡುವುದು, ಜನರನ್ನು ಮನೆಯಿಂದ ಎತ್ತಂಗಡಿ ಮಾಡುವುದು, ದಾರಿಯಲ್ಲೇ ಬಂಧಿಸುವುದು… ಪೋಲೀಸರು ಅನುಮತಿ ಕೊಡುತ್ತಿಲ್ಲ, ಕೋರ್ಟ್ ಅನುಮತಿ ನೀಡುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಿಜೆಪಿ ಮತ್ತು ನಾಗರಿಕ ಸಮಾಜ ಆಯೋಜಿಸಿದ್ದ ‘ಪೀಪಲ್ಸ್ ಟ್ರಿಬ್ಯೂನಲ್’ ಪ್ರತಿಭಟನೆಯಲ್ಲಿ ಪ್ರಕಾಶ್ ರಾಜ್ ಭಾಗವಹಿಸಿದ್ದರು. ಅಲ್ಲಿ ಯೂಟ್ಯೂಬರ್ ಧ್ರುವ ರಾಠಿ ಮತ್ತು ಸಿಜೆಪಿ ಸಂಸ್ಥಾಪಕ ಅಭೀಜಿತ್ ದಿಪ್ಕೆ ಜೊತೆಗೂಡಿ SIR ವಿರುದ್ಧ ಧ್ವನಿ ಎತ್ತಿದ್ದರು. ಈಗ ದೆಹಲಿ ಪ್ರತಿಭಟನೆಗೆ ತಡೆ ಬಿದ್ದಿರುವುದು ದೇಶಾದ್ಯಂತ ರಾಜಕೀಯ ಕಾವು ಹೆಚ್ಚಿಸಿದೆ.



