ಸವಾರರನ್ನು ಯಾಮಾರಿಸಿ ಬೈಕ್ ಕಳವು: ಚಾಲಾಕಿ ಖದೀಮ ಅಂದರ್!

ಹೊಸದಿಗಂತ ವರದಿ, ಅಂಕೋಲಾ:

ಬೈಕ್ ಸವಾರರನ್ನು ಯಾಮಾರಿಸಿ ಹೊಸ ಹೊಸ ಬೈಕುಗಳನ್ನು ಕದ್ದು ಶೋಕಿ ಜೀವನ ನಡೆಸುತ್ತಿದ್ದ ಚಾಲಾಕಿ ಕಳ್ಳನನ್ನು ಬಂಧಿಸುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಮಡ್ಲೇರಿ ನಿವಾಸಿ ಅರಾಫತ್ ಅಬ್ದುಲ್ ಅಜೀಂಸಾಬ್ ಅತ್ತಾರ್ (30) ಬಂಧಿತ ವ್ಯಕ್ತಿಯಾಗಿದ್ದು ಈತ ತಾನು ಬೈಕ್ ಖರೀದಿ ಮಾಡಬೇಕು ಸ್ವಲ್ಪ ಟ್ರಯಲ್ ನೋಡುವುದಾಗಿ ತಿಳಿಸಿ ಬೈಕ್ ಪಡೆದು ಪರಾರಿಯಾಗುತ್ತಿದ್ದ ಅಂಕೋಲಾ ಸೇರಿದಂತೆ ರಾಜ್ಯದ ಹಲವೆಡೆ ಇದೇ ರೀತಿಯ ಕೃತ್ಯಗಳನ್ನು ನಡೆಸಿದ್ದ. ಇತ್ತೀಚೆಗೆ ತಾಲೂಕಿನ ಬಾಳೇಗುಳಿ ಯಮಹಾ ಶೋ ರೂಮ್ ಎದುರು ಟ್ರಯಲ್ ನೋಡುವುದಾಗಿ ಹೇಳಿ ಯುವಕನೋರ್ವನಿಂದ ದುಬಾರಿ ಬೆಲೆಯ ಕೆಟಿಎಂ ಡ್ಯೂಕ್ ಬೈಕ್ ಪಡೆದುಕೊಂಡು ನಾಪತ್ತೆಯಾಗಿದ್ದ ತಾನು ತಂದ ಹೀರೋ ಸ್ಪ್ಲೆಂಡರ್ ಬೈಕನ್ನು ಯುವಕನ ಬಳಿ ಬಿಟ್ಟು ತನಗೆ ಡ್ಯೂಕ್ ಬೈಕ್ ಖರೀದಿ ಮಾಡಬೇಕಿದೆ ಒಂದು ಸುತ್ತು ಟ್ರಯಲ್ ನೋಡಿ ಬರುವುದಾಗಿ ಹೇಳಿದ ವ್ಯಕ್ತಿಯ ಮಾತು ನಂಬಿದ ತಾಲೂಕಿನ ಮಂಜಗುಣಿ ನಿವಾಸಿ ಅರವಿಂದ ತಾಂಡೇಲ್ ಎಂಬ ಯುವಕ ಬೈಕ್ ನೀಡಿ ಮೋಸಹೋಗಿದ್ದ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಪೊಲೀಸರು ವಿಚಾರಣೆ ನಡೆಸಿದಾಗ ವ್ಯಕ್ತಿ ಬಿಟ್ಟು ಹೋದ ಬೈಕ್ ಸಹ ಹುಬ್ಬಳ್ಳಿಯಲ್ಲಿ ಅದೇ ರೀತಿಯಲ್ಲಿ ಮೋಸ ಮಾಡಿ ತಂದಿರುವ ಸಂಗತಿ ತಿಳಿದು ಬಂದಿತ್ತು.
ಕಳೆದ ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಆಂದ್ರ ಮೂಲದ ಪ್ರವಾಸಿಗನನ್ನು ಯಾಮಾರಿಸಿ ಅಂಕೋಲಾದಿಂದ ಕದ್ದೊಯ್ದ ಡ್ಯೂಕ್ ಬೈಕ್ ಆತನಲ್ಲಿ ಬಿಟ್ಟು ಟ್ರಯಲ್ ನೋಡುವ ನೆಪದಲ್ಲಿ ಆತನ ಹೀರೋ ಪಲ್ಸ್ ಬೈಕ್ ತೆಗೆದುಕೊಂಡು ನಾಪತ್ತೆಯಾಗಿದ್ದ ಖದೀಮನ ಮೇಲೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಅಂಕೋಲಾ ಯುವಕನ ಬೈಕ್ ಚಿಕ್ಕ ಮಗಳೂರಿನಲ್ಲಿ ಪತ್ತೆಯಾದ ನಂತರ ಕಾರ್ಯ ಪೃವೃತ್ತರಾದ ಪಿ.ಎಸ್. ಐ ಪ್ರೇಮನಗೌಡ ಪಾಟೀಲ್ ನೇತೃತ್ವದ ಅಂಕೋಲಾ ಪೊಲೀಸರ ತಂಡ ಆರೋಪಿ ಅರಾಫತ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ.ಜಯಕುಮಾರ, ಡಿ.ವೈ.ಎಸ್. ಪಿ ವೆಲಂಟನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಪಿ.ಎಸ್. ಐ ಪ್ರೇಮನಗೌಡ ಪಾಟೀಲ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಇನ್ನೂ ಹಲವಾರು ಕಡೆಗಳಲ್ಲಿ ಬೈಕ್ ಕಳ್ಳತನ, ಮೊಬೈಲ್ ಕಳ್ಳತನ ಮೊದಲಾದ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆರೋಪಿಯನ್ನು ಬಂಧಿಸಿದ ಅಂಕೋಲಾ ಪೊಲೀಸರ ಕ್ರಮಕ್ಕೆ ಪೊಲೀಸ್ ವರಿಷ್ಠ ವಿಷ್ಣುವರ್ಧನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!