ಉದ್ದೀಪನ ಮದ್ದು ಸೇವನೆ ಪ್ರಕರಣ: ಎಂ.ಆರ್.ಪೂವಮ್ಮಗೆ ಎರಡು ವರ್ಷ ನಿಷೇಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಏಷ್ಯನ್ ಗೇಮ್ಸ್ ರಿಲೇ ಚಿನ್ನದ ಪದಕ ವಿಜೇತೆ ಎಂ.ಆರ್.ಪೂವಮ್ಮ ಅವರಿಗೆ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ ಮೇಲ್ಮನವಿ ಸಮಿತಿಯು ಎರಡು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ.

ಈ ನಿಷೇಧದ ಕಾರಣದಿಂದಾಗಿ ಎಂಆರ್‌ ಪೂವಮ್ಮ ಮುಂದಿನ ವರ್ಷ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಏಷ್ಯನ್‌ ಗೇಮ್ಸ್‌ನಿಂದ ಹೊರಬಿದ್ದಂತಾಗಿದೆ.

2021ರ ಫೆಬ್ರವರಿ 18 ರಂದು ಪಟಿಯಾಲಾದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್-1 ಸಮಯದಲ್ಲಿ ಪೂವಮ್ಮ ಅವರ ಸ್ಯಾಂಪಲ್‌ಅನ್ನು ಪರೀಕ್ಷೆ ಮಾಡಲಾಗಿತ್ತು. ಈ ಸ್ಯಾಂಪಲ್‌ನಲ್ಲಿ ನಿಷೇಧಿತ ಉದ್ದೀಪನವಾದ ಮೀಥೈಲ್ಹೆಕ್ಸಾನಿಮೈನ್‌ ಕಂಡುಬಂದಿತ್ತು.

ಪೂವಮ್ಮ ಅವರ ಎ ಮತ್ತು ಬಿ ಮಾದರಿಗಳೆರಡೂ ಪಾಸಿಟಿವ್‌ ಫಲಿತಾಂಶ ಬಂದಿತ್ತು. ಆದರೆ ಪೂವಮ್ಮ ಮಾತ್ರ ತಾವು ನಿಷೇಧಿತ ಉದ್ದೀಪನ ತೆಗೆದುಕೊಂಡಿಲ್ಲ ಎಂದು ಹೇಳಿದ್ದರು. ಬೆಡ್‌ಟೈಮ್ ಲ್ಯಾಟೆ ಎಂಬ ಆಯುರ್ವೇದ ಉತ್ಪನ್ನವನ್ನು ತಾನು ಸೇವಿಸುತ್ತಿದ್ದೆ ಎಂದು ಹೇಳಿದ್ದರು. ಡೋಪಿಂಗ್ ವಿರೋಧಿ ಶಿಸ್ತಿನ ಸಮಿತಿ (ಎಡಿಡಿಪಿ) ಆಕೆಗೆ ಮೂರು ತಿಂಗಳ ಅಮಾನತು ಶಿಕ್ಷೆಯನ್ನು 2022ರ ಜೂನ್‌ನಲ್ಲಿ ನೀಡಿತ್ತು. ಆದರೆ, ನಾಡಾ ಈ ತೀರ್ಪಿನ ವಿರುದ್ಧವೇ ಮೇಲ್ಮನವಿ ಸಲ್ಲಿಕೆ ಮಾಡಿತ್ತು.

ಯಾವುದೇ ತರ್ಕಬದ್ಧ ಮಾನದಂಡ, ನಿಯಮ ಅಥವಾ ಮಾರ್ಗಸೂಚಿಗೆ ಬದ್ಧವಾಗಿರದೆ ಎಡಿಡಿಪಿ ಆಕೆಗೆ ಕಡಿಮೆ ಶಿಕ್ಷೆಯನ್ನು ನೀಡಿದೆ ಮತ್ತು ಆಕೆಯ ದೇಹದಲ್ಲಿ ಕಂಡುಬರುವ ವಸ್ತುವು ಸಾಮಾನ್ಯವಾಗಿ ದುರುಪಯೋಗಪಡಿಸಿಕೊಂಡ ಕಾರ್ಯಕ್ಷಮತೆ ವರ್ಧಕವಾಗಿದೆ ಎಂದು ಮೇಲ್ಮನವಿ ಸಮಿತಿಯು ಭಾವಿಸಿದೆ. ಇದೀಗ ಪೂವಮ್ಮ ಅವರ ಮೇಲೆ ಎರಡು ವರ್ಷಗಳ ನಿಷೇಧ ಶಿಕ್ಷೆಯನ್ನು ವಿಧಿಸಿದೆ ಮತ್ತು ಮಾದರಿ ಸಂಗ್ರಹಣೆಯ ದಿನಾಂಕದಿಂದ (ಫೆಬ್ರವರಿ 18, 2021) ಅವರ ಎಲ್ಲಾ ಫಲಿತಾಂಶಗಳನ್ನು ಅನರ್ಹಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!