ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಂಪನಿಯೊಂದನ್ನು ಷೇರುಪೇಟೆಯಲ್ಲಿ ನೋಂದಣಿ ಮಾಡಲು ಅಕ್ರಮವಾಗಿ ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಸೆಬಿ ಮಾಜಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಹಾಗೂ ಇತರೆ ಐವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಮಾಧಬಿ ಬುಚ್ ಹೊರತುಪಡಿಸಿ, ಬಾಂಬೆ ಸ್ಟಾಕ್ ವಿನಿಮಯ (ಬಿಎಸ್‌ಇ)ದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರರಾಮನ್ ರಾಮಮೂರ್ತಿ, ಅದರ ಮಾಜಿ ಅಧ್ಯಕ್ಷ ಪ್ರಮೋದ್ ಅಗರ್ವಾಲ್, ಸೆಬಿಯ ಸದಸ್ಯರಾದ ಅಶ್ವನಿ ಭಾಟಿಯಾ, ಅನಂತ್ ನಾರಾಯಣ್, ಕಮಲೇಶ್ ಚಂದ್ರ ವರ್ಷ್ನೇ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶಿಸಿದೆ.
ಪ್ರಕರಣದಲ್ಲಿ ಮೇಲ್ನೋಟಕ್ಕೆ ನಿಯಂತ್ರಣಾ ಕ್ರಮಗಳ ಪಾಲನೆಯಲ್ಲಿ ಲೋಪವಾಗಿರುವುದು ಮತ್ತು ಒಳಸಂಚುಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ಕಂಡುಬರುತ್ತಿವೆ. ಹೀಗಾಗಿ ಈ ಪ್ರಕರಣದ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಹಾಗೂ 30 ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಿಶೇಷ ನ್ಯಾಯಾಲಯ ಸೂಚಿಸಿದೆ.