Saturday, June 10, 2023

Latest Posts

ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲುತೂರಾಟ ಸಹಿಸಲು ಅಸಾಧ್ಯ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಬೆಂಗಳೂರು: ಕಾಂಗ್ರೆಸ್ ಹಿಂಸೆಗೆ ಪ್ರಚೋದನೆ ನೀಡಿ ನಾವು ಸಾಮಾಜಿಕವಾಗಿ ಕೊಟ್ಟ ಮೀಸಲಾತಿಗಳಿಗೆ ವಿರುದ್ಧವಾದ ರಾಜಕಾರಣ ಮಾಡಲು ಮುಂದಾದರೆ, ಬಿಜೆಪಿ ಮತ್ತು ದಲಿತ ಸಂಘಟನೆಗಳು ಕಣ್ಮುಚ್ಚಿ ಕುಳಿತುಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ಎಚ್ಚರಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲುತೂರಾಟ, ಅಪಮಾನವನ್ನು ಸಹಿಸಲು ಅಸಾಧ್ಯ ಎಂದರಲ್ಲದೆ, ಶಾಸಕ ಅಭ್ಯರ್ಥಿ ಆಗಹೊರಟ ಕಾಂಗ್ರೆಸ್ ನಾಯಕನ ನೇತೃತ್ವದಲ್ಲಿ ಯಡಿಯೂರಪ್ಪ ಅವರ ಮನೆ ಮೇಲೆ ದಾಳಿ ಆಗಿದೆ. ಜಸ್ಟಿಸ್ ಸದಾಶಿವ ಆಯೋಗದ ವರದಿ ಜಾರಿ ಚರ್ಚೆ ವೇಳೆ ಲಂಬಾಣಿ ಮತ್ತಿತರ ಕೆಲವು ಜಾತಿಗಳನ್ನು ತೆಗೆದು ಹಾಕುತ್ತಾರೆ ಎಂಬ ಪುಕಾರು ಹಬ್ಬಿಸಿದ್ದರು ಎಂದು ವಿವರಿಸಿದರು.

ಬಿಜೆಪಿಯ ಹಿರಿಯ, ಮುತ್ಸದ್ಧಿ ನಾಯಕ ಯಡಿಯೂರಪ್ಪ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಇಂಥ ಘಟನೆ ಮರುಕಳಿಸಬಾರದು ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಒಳ ಮೀಸಲಾತಿ ಬಗ್ಗೆ 30 ವರ್ಷಗಳಿಂದ ಅನೇಕ ಹೋರಾಟಗಳು ನಡೆದಿವೆ. ಕಾಂಗ್ರೆಸ್‍ನವರೇ ಜಸ್ಟಿಸ್ ಸದಾಶಿವ ಅವರನ್ನು ನೇಮಿಸಿದರು. ಒಂದು ಸಮುದಾಯ ನಿರಂತರ ಹೋರಾಟ ಮಾಡುತ್ತಿದ್ದಾಗ ವರದಿಗೆ ಅವಶ್ಯವಿದ್ದ 15 ಕೋಟಿಯನ್ನು ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ್ದರು. ಜಸ್ಟಿಸ್ ಸದಾಶಿವ ಅವರು ಎಲ್ಲ ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದರು. ಮಾಹಿತಿ ಸಂಗ್ರಹಿಸಿ 2012ರಲ್ಲಿ ವರದಿ ಕೊಟ್ಟರೂ ಅದು ಜಾರಿ ಆಗಲಿಲ್ಲ ಎಂದು ತಿಳಿಸಿದರು.

ಬಳಿಕ ಕಾಂಗ್ರೆಸ್ ಸರಕಾರ 5 ವರ್ಷ ಅಧಿಕಾರದಲ್ಲಿತ್ತು ಎಂದ ಅವರು, ಕ್ಯಾಬಿನೆಟ್‍ಗೆ ಬರಬೇಕಾದ ಹಂತದಲ್ಲಿ ಈ ವಿಚಾರವನ್ನು ತಡೆಹಿಡಿಯಲಾಯಿತು ಎಂದರು. ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ಅಪಮಾನವನ್ನು ಎಂದ ಅವರು, ಯಾರೂ ಇದನ್ನು ಸಹಿಸಲು ಅಸಾಧ್ಯ ಎಂದು ತಿಳಿಸಿದರು.

ಸಾಮಾಜಿಕ ನ್ಯಾಯದ ವಿಚಾರದಲ್ಲಿ ಬದ್ಧತೆ ಇರುವ ಬಿಜೆಪಿ ಮೇಲೆ ಷಡ್ಯಂತ್ರ ಯಾಕೆ ಎಂದು ಪ್ರಶ್ನಿಸಿದರು. ನಮ್ಮ ಸರಕಾರಕ್ಕೆ ಸಾಮಾಜಿಕ ನ್ಯಾಯದ ಬದ್ಧತೆ ಇದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ವಿನಂತಿಸಿದರು.

ಯಡಿಯೂರಪ್ಪನವರು ತಾಂಡಾ ನಿಗಮ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿಯವರು ಈಚೆಗೆ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಅಧಿಸೂಚನೆ ಹೊರಡಿಸಿದವರು. ಕಂದಾಯ ಮಂತ್ರಿ ಅಶೋಕ್ ಅವರ ನೇತೃತ್ವ, ಬೊಮ್ಮಾಯಿಯವರ ಮಾರ್ಗದರ್ಶನದಲ್ಲಿ ಈ ಕಾರ್ಯ ನಡೆದಿದೆ ಎಂದು ವಿವರಿಸಿದರು. 2015ರಲ್ಲೇ ಈ ಕುರಿತು ಸದನದಲ್ಲಿ ಚರ್ಚೆ ಆಗಿ ಬಿಲ್ ಆದರೂ ಒಂದೇ ಒಂದು ತಾಂಡಾ, ಕುರುಬರಹಟ್ಟಿ, ಬೋವಿಹಟ್ಟಿ ಹಲವು ವರ್ಷಗಳ ಕಾಲ ಕಂದಾಯ ಗ್ರಾಮ ಆಗಿರಲಿಲ್ಲ ಎಂದು ಟೀಕಿಸಿದರು.

ಕರ್ನಾಟಕದಲ್ಲಿ 2 ಲಕ್ಷ ಹಕ್ಕುಪತ್ರ ಕೊಡಲಾಗಿದೆ. ಇವತ್ತು ನಾನು ಹಕ್ಕುಪತ್ರ ಕೊಟ್ಟು ಬಂದಿದ್ದೇನೆ ಎಂದ ಅವರು, ಒಳ ಮೀಸಲಾತಿ ಸಂಬಂಧ ಬೊಮ್ಮಾಯಿಯವರು ಅನೇಕ ಸ್ವಾಮೀಜಿಗಳ ಜೊತೆ ಚರ್ಚೆ ಮಾಡಿದ್ದಾರೆ. ವಿವಿಧ ಆಯೋಗಗಳ ವರದಿ ಪರಿಶೀಲಿಸಿ ಮಾಧುಸ್ವಾಮಿ ಅವರ ಬಳಿ ವರದಿ ತರಿಸಿಕೊಂಡು ವರ್ಗೀಕರಣ ಮಾಡಲಾಗಿದೆ. ಪರಿಶಿಷ್ಟರಲ್ಲಿ 76 ವರ್ಷಗಳಿಂದ ಮೀಸಲಾತಿ ಒಂದೇ ಒಂದು ಅಂಶವನ್ನೂ ಪಡೆಯದ ಅಲೆಮಾರಿಗಳಿಗೆ ಶೇಕಡಾ 1 ಮೀಸಲಾತಿ ಕೊಟ್ಟಿದ್ದೇವೆ. ಆದರೂ, ಅದರ ವಿರುದ್ಧ ಕಾಂಗ್ರೆಸ್ಸಿನವರು ಮಾತನಾಡುತ್ತಾರೆ ಎಂದು ಟೀಕಿಸಿದರು.

ಪಂಚಮಸಾಲಿ, ಒಕ್ಕಲಿಗ ಸಮುದಾಯಕ್ಕೆ ಶೇ 2ರಷ್ಟು ಮೀಸಲಾತಿ ಹೆಚ್ಚಿಸಿದ್ದಾರೆ. ಅದನ್ನು ಕಿತ್ತು ಹಾಕುವ ಧೈರ್ಯ ಕಾಂಗ್ರೆಸ್ಸಿಗೆ ಇದೆಯೇ ಎಂದು ಪ್ರಶ್ನಿಸಿದರು. ಬಿಜೆಪಿಯವರು ಸಾಮಾಜಿಕ ನ್ಯಾಯ ಕೊಟ್ಟಿದ್ದಾರೆ. ಬಂಜಾರ, ಕೊರಮ ಸಮುದಾಯಕ್ಕೆ ಸೇರಿದವರಿಗೆ ಹೋರಾಟಕ್ಕೆ ಅವಕಾಶವಿದೆ. ಆದರೆ, ಹಿಂಸೆಯ ಹೋರಾಟ ತ್ಯಜಿಸಿ, ನ್ಯಾಯಬದ್ಧವಾಗಿ ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು.

17 ಶೇಕಡಾವನ್ನು ಸಮರ್ಪಕವಾಗಿ ವಿಂಗಡಿಸಲಾಗಿದೆ. ಯಾವುದೇ ಸಮುದಾಯಕ್ಕೆ ಅನ್ಯಾಯ ಆಗಿಲ್ಲ. ಒಳ ಮೀಸಲಾತಿ ಸಂಬಂಧ ಮುಖ್ಯಮಂತ್ರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು. ರಾಜ್ಯದ ಇತಿಹಾಸದಲ್ಲಿ ಇದೊಂದು ಉತ್ತಮ ತೀರ್ಮಾನ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಮಾತನಾಡಿ, ತಾಂಡಾ ಅಭಿವೃದ್ಧಿ ನಿಗಮ ಸ್ಥಾಪಿಸಿ ಹೆಚ್ಚು ಅನುದಾನ ಕೊಟ್ಟವರು ಯಡಿಯೂರಪ್ಪನವರು. ಆದರೆ, ಕಾಂಗ್ರೆಸ್‍ನವರ ಕುಚೋದ್ಯದಿಂದ ಕಲ್ಲು ತೂರಾಟ ಮಾಡಿದ್ದಾರೆ. ಇಂಥ ಹಿಂಸಾಚಾರವನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.

ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಕಲ್ಬುರ್ಗಿಯಲ್ಲಿ ತಾಂಡಾ ನಿವಾಸಿಗಳಿಗೆ ಒಂದೇ ದಿನ 51 ಸಾವಿರ ಹಕ್ಕುಪತ್ರ ಕೊಟ್ಟದ್ದು ಬಿಜೆಪಿಯ ಬೊಮ್ಮಾಯಿ ಅವರ ಸರಕಾರ. ಒಳ ಮೀಸಲಾತಿ ವರ್ಗೀಕರಣ ಆಗಿದೆ. ಆದೇಶವನ್ನೂ ಕೊಡಲಾಗಿದೆ. ವಿವಿಧ ಆಯೋಗ, ಸಮಿತಿಗಳ ರಚನೆ ಮಾಡಿ ವರದಿ ಪಡೆಯಲಾಗಿದೆ. ಕಾಂತರಾಜ್ ಸಮಿತಿ ವರದಿ ಸಿದ್ಧತೆಗೆ 182 ಕೋಟಿ ಖರ್ಚು ಮಾಡಿ ಕಾಲಹರಣ ಮಾಡಿದ್ದಾರೆ ಎಂದು ಟೀಕಿಸಿದರು.

ಸ್ವಾಮೀಜಿಗಳ ಮೇಲೆ ಒತ್ತಡ ಹಾಕಲಾಗಿದೆ ಎಂಬ ಡಿ.ಕೆ.ಶಿವಕುಮಾರ್ ಅವರ ಮಾತನ್ನು ಒಪ್ಪಲಸಾಧ್ಯ. ಇದು ಧಮಕಿ ಹಾಕುವ ಮಾತು. ಯಾರೂ ಒತ್ತಡ ಹೇರಿಲ್ಲ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಸಮಾಜವನ್ನು ತಪ್ಪು ದಾರಿಗೆ ಎಳೆಯುವಂಥದ್ದು ಸಲ್ಲದು ಎಂದು ಆಕ್ಷೇಪಿಸಿದರು.

ನ್ಯಾಯಾನ್ಯಾಯದ ಬಗ್ಗೆ ಯಡಿಯೂರಪ್ಪ ಅವರ ಜೊತೆ ಚರ್ಚಿಸಲಿ ಎಂದು ಅವರು ಆಹ್ವಾನಿಸಿದರು. ಜನತೆಯನ್ನು ತಪ್ಪು ದಾರಿಗೆ ಎಳೆಯುವ ಕಾಂಗ್ರೆಸ್‍ನವರು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲೆಸೆತ, ಹಿಂಸಾಚಾರ ಸರಿಯಲ್ಲ. ಯಾರಿಗೂ ಅನ್ಯಾಯ ಆಗಿಲ್ಲ. ಕಾಂಗ್ರೆಸ್ಸಿನವರ ರಾಗ ಬದಲಾಗಿದೆ. ಮತಬ್ಯಾಂಕ್ ರಾಜಕೀಯಕ್ಕಾಗಿ ಪ್ರಚೋದನೆ ಮಾಡಿ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ತಿಳಿಸಿದರು.

ಲಂಬಾಣಿ ಸಮುದಾಯದವರಿಗೆ ಹಕ್ಕುಪತ್ರ, ಭೂಮಿ ಕೊಟ್ಟದ್ದು ಬಿಜೆಪಿ. ಕಾಂಗ್ರೆಸ್ ಈ ಕೆಲಸ ಮಾಡಿಲ್ಲ. ಲಂಬಾಣಿ ಸಮುದಾಯ ಪ್ರಚೋದನೆಗೆ ಒಳಗಾಗಬಾರದು. ಅವಶ್ಯವಿದ್ದರೆ ಮನವಿ ಕೊಡಿ ಎಂದು ವಿನಂತಿಸಿದರು. ಕಾಂಗ್ರೆಸ್‍ನವರು ಮತಬ್ಯಾಂಕಿಗಾಗಿ ತಂಟೆ, ತಕರಾರು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಮಾದಿಗ ಸಮುದಾಯದ 30 ವರ್ಷಗಳ ಹೋರಾಟಕ್ಕೆ ಕಾಂಗ್ರೆಸ್ಸಿನ ಉತ್ತರ ಏನು ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಕಾಂಗ್ರೆಸ್ ಪಕ್ಷವು ಗೂಂಡಾಗಿರಿಯನ್ನು ಬಿತ್ತುತ್ತಿದೆ ಎಂದ ಅವರು, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳದಿರಿ ಎಂದು ತಿಳಿಸಿದರು. ಸರಕಾರಕ್ಕೆ ಬಿನ್ನಹ ಸಲ್ಲಿಸಿ ಪರಿಹಾರ ಪಡೆದುಕೊಳ್ಳಿ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!