ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಲಕ್ನೋದಿಂದ ದೆಹಲಿ ಮಾರ್ಗವಾಗಿ ಮೀರತ್‌ಗೆ ತೆರಳುತ್ತಿದ್ದ ವೇಳೆ ಹಾರ್ದೋಯ್ ಸಮೀಪ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ಮಧ್ಯಾಹ್ನ ಸುಮಾರು 3:30ರ ವೇಳೆಗೆ ಅಜ್ಞಾತ ವ್ಯಕ್ತಿಗಳು ರೈಲಿನ ಮೇಲೆ ಕಲ್ಲು ಎಸೆದಿದ್ದಾರೆ ಎನ್ನಲಾಗಿದೆ. ಘಟನೆಯ ನಂತರ ರೈಲ್ವೆ ಪೊಲೀಸ್ ಇಲಾಖೆ ತಕ್ಷಣ ಎಚ್ಚರಗೊಂಡು ತನಿಖೆ ಆರಂಭಿಸಿದೆ. ವಿಶೇಷ ತಂಡವನ್ನು ರಚಿಸಿ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ಕೈಗೊಳ್ಳಲಾಗಿದೆ.
ಇದನ್ನೂ ಓದಿ:
ಘಟನೆಯ ನಡುವೆಯೂ ಮೋಹನ್ ಭಾಗವತ್ ಸುರಕ್ಷಿತರಾಗಿದ್ದು, ರಾತ್ರಿ 9 ಗಂಟೆ ಸುಮಾರಿಗೆ ಮೀರತ್ ರೈಲು ನಿಲ್ದಾಣಕ್ಕೆ ತಲುಪಿದ್ದಾರೆ. ಅಲ್ಲಿ ಬಿಗಿ ಭದ್ರತೆಯೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಅವರು ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕ್ರೀಡಾಪಟುಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಹಿನ್ನೆಲೆ ರೈಲು ಭದ್ರತೆ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಉದ್ಭವಿಸಿವೆ. ಅಧಿಕಾರಿಗಳು ಸಂಪೂರ್ಣ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.



