ಹೊಸದಿಗಂತ ವರದಿ ರಾಮನಗರ:
ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಸ್ಪಂದಿಸಿ, ತನ್ನ ಕರ್ತವ್ಯ ನಿರ್ವಹಿಸಲಿ ಸ್ಪಂದಿಸಲಿ. ಬಳಿಕ, ಕೇಂದ್ರ ಸರ್ಕಾರದತ್ತ ನೋಡಲಿ. ಅದು ಬಿಟ್ಟು ನಮ್ಮ ಮೇಲೆ ಗೂಬೆ ಕೂರಿಸುವ ನಾಟಕ ಬಿಡಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದರು.
ಆಶಾ ಕಾರ್ಯಕರ್ತೆಯರ ಹೋರಾಟ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಲ್ಲಿ ಕೇಂದ್ರ ಸರ್ಕಾರವನ್ನು ದೂರುವುದಕ್ಕಿಂತ ಹೆಚ್ಚಾಗಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿಲ್ಲ. ಇಷ್ಟು ದಿನ ಸಮಸ್ಯೆಯನ್ನು ಬಗೆಹರಿಸದೆ ಹಾಗೆಯೇ ಬಿಟ್ಟಿದ್ದು ತಪ್ಪು. ಈಗಲಾದರೂ ಮುಖ್ಯಮಂತ್ರಿ ಸಮಸ್ಯೆ ಬಗೆಹರಿಸಲಿ ಎಂದು ತಿಳಿಸಿದರು.
ಇದನ್ನೂ ಓದಿ:
ಕಾರ್ಯಕರ್ತೆಯರ ಬೇಡಿಕೆ ಕುರಿತು ಮಾನವೀಯ ದೃಷ್ಟಿಯಿಂದ ಚರ್ಚಿಸಲಿ. ಬೇರೆ ರಾಜ್ಯಗಳಿಗೆ ಸ್ಪಂದಿಸಿದಂತೆಯೇ ಕರ್ನಾಟಕಕ್ಕೂ ಕೇಂದ್ರ ಸಂಪೂರ್ಣ ಸಹಕಾರ ನೀಡಲಿದೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ನಾವು ಯಾವುದಕ್ಕೂ ಅಡ್ಡಿಪಡಿಸಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ಕೈ ಜೋಡಿಸುತ್ತಿದ್ದೇವೆ ಎಂದರು.
ಸಮಸ್ಯೆಯಲ್ಲಿರುವ ಬಡಪಾಯಿಗಳಿಗೆ ನ್ಯಾಯ ಸಿಗಬೇಕು. ಬೇರೆ ರಾಜ್ಯಗಳಲ್ಲಿರುವ ಉತ್ತಮ ವ್ಯವಸ್ಥೆಯನ್ನು ಇಲ್ಲೂ ಅಳವಡಿಸುವ ಬಗ್ಗೆ ಚರ್ಚೆಯಾಗಲಿ. ಅದು ಬಿಟ್ಟು ನಮ್ಮಮೇಲೆ ಗೂಬೆ ಕೂರಿಸುವ ಡ್ರಾಮಾ ಬಿಡಬೇಕು. ಕಾರ್ಯಕರ್ತೆಯರು ಹೋರಾಟ ನಿಲ್ಲಿಸುವಂತೆ ಮಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಮೊದಲು ಅದನ್ನು ಮಾಡಿ, ಆನಂತರ ಕೇಂದ್ರಕ್ಕೆ ಬರಲಿ. ಆಗ ಕುಳಿತು ಚರ್ಚಿಸುತ್ತೇವೆ ಎಂದರು.



