August 21, 2026
Friday, August 21, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 65 | ವರಮಹಾಲಕ್ಷ್ಮಿ ಹಬ್ಬಕ್ಕೆ ಸ್ಪೆಷಲ್ ಕ್ಯಾರೆಟ್ ಕೇಸರಿಬಾತ್ ಹೀಗೆ ಮಾಡಿ

ವರಮಹಾಲಕ್ಷ್ಮಿ ಹಬ್ಬದ ದಿನ ಸಿಹಿ ಖಾದ್ಯ ಮಾಡಬೇಕು ಅನ್ನೋರಿಗೆ ಸಾಮಾನ್ಯ ಕೇಸರಿಬಾತ್‌ಗಿಂತ ವಿಭಿನ್ನವಾಗಿ ಕ್ಯಾರೆಟ್ ಕೇಸರಿಬಾತ್ ಒಮ್ಮೆ ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು

ಬಾಂಬೆ ರವೆ – 1 ಕಪ್
ಕ್ಯಾರೆಟ್ – 1 ಕಪ್, ತುರಿದದ್ದು
ಸಕ್ಕರೆ – 1 ರಿಂದ 1¼ ಕಪ್
ತುಪ್ಪ – 4–5 ಟೇಬಲ್‌ಸ್ಪೂನ್
ಹಾಲು – 1 ಕಪ್
ನೀರು – 1½ ಕಪ್
ಗೋಡಂಬಿ – 8–10
ದ್ರಾಕ್ಷಿ – 1 ಟೇಬಲ್‌ಸ್ಪೂನ್
ಏಲಕ್ಕಿ ಪುಡಿ – ½ ಟೀಸ್ಪೂನ್
ಕೇಸರಿ – ಸ್ವಲ್ಪ
ಕಿತ್ತಳೆ ಬಣ್ಣ – ಬೇಕಿದ್ದರೆ ಮಾತ್ರ

ಮಾಡುವ ವಿಧಾನ

ಮೊದಲಿಗೆ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿದು ತೆಗೆದಿಡಿ. ಅದೇ ಬಾಣಲೆಗೆ ರವೆ ಹಾಕಿ ಸುವಾಸನೆ ಬರುವವರೆಗೆ ನಿಧಾನ ಉರಿಯಲ್ಲಿ ಹುರಿಯಿರಿ.

ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ತುಪ್ಪ ಹಾಕಿ ತುರಿದ ಕ್ಯಾರೆಟ್‌ನ್ನು 3–4 ನಿಮಿಷ ಹುರಿಯಿರಿ. ನಂತರ ನೀರು ಮತ್ತು ಹಾಲು ಸೇರಿಸಿ ಕುದಿಯಲು ಬಿಡಿ. ಕುದಿಯುತ್ತಿರುವ ಮಿಶ್ರಣಕ್ಕೆ ಹುರಿದ ರವೆಯನ್ನು ನಿಧಾನವಾಗಿ ಹಾಕುತ್ತಾ ನಿರಂತರವಾಗಿ ಕೈಯಾಡಿಸಿ, ಗಂಟು ಬರದಂತೆ ಬೇಯಿಸಿ.

ರವೆ ಚೆನ್ನಾಗಿ ಬೆಂದ ಬಳಿಕ ಸಕ್ಕರೆ ಸೇರಿಸಿ. ಸಕ್ಕರೆ ಕರಗಿದ ನಂತರ ತುಪ್ಪವನ್ನು ಸ್ವಲ್ಪಸ್ವಲ್ಪವಾಗಿ ಹಾಕುತ್ತಾ ಮಿಶ್ರಣವನ್ನು ಚೆನ್ನಾಗಿ ಕಲಸಿ. ಕೊನೆಯಲ್ಲಿ ಏಲಕ್ಕಿ ಪುಡಿ, ಕೇಸರಿ ಮತ್ತು ಹುರಿದ ಗೋಡಂಬಿ-ದ್ರಾಕ್ಷಿ ಸೇರಿಸಿ. ಕೇಸರಿಬಾತ್ ಬಾಣಲೆಯ ಅಂಚು ಬಿಡಲು ಆರಂಭಿಸಿದಾಗ ಉರಿ ಆಫ್ ಮಾಡಿ.

ಬಿಸಿ ಬಿಸಿ ಕ್ಯಾರೆಟ್ ಕೇಸರಿಬಾತ್‌ನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿ, ಹಬ್ಬದ ಸಿಹಿಯನ್ನು ಮನೆಯವರೊಂದಿಗೆ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !