ಮೊದಲನೇ ರೌಂಡ್ ಇಂಟರ್‌ವ್ಯೂ ಕ್ಲಿಯರ್ ಆಗಿತ್ತು. ಈಗ ಬಾಸ್ ಫೈನಲ್ ಇಂಟರ್‌ವ್ಯೂ ತೆಗೆದುಕೊಳ್ಳುವವರಿದ್ದರು. ರೆಸ್ಯೂಮ್ ನೋಡುತ್ತಾ ಬಾಸ್, ವೆರಿ ಇಂಪ್ರೆಸ್ಸೀವ್ ಎಂದರು. ನಂತರ ಸ್ಕಾಲರ್‌ಶಿಪ್‌ನಲ್ಲಿ ಓದಿದೆಯೋ ಅಥವಾ ಫೀಸ್ ಕಟ್ಟಿ ಓದಿದ್ದೋ ಕೇಳಿದರು. ಆತ ಸ್ಕಾಲರ್‌ಶಿಪ್ ಇಲ್ಲ. ಫೀಸ್ ಕಟ್ಟಿದ್ದೇವೆ. ಯಾರು ಕಟ್ಟಿದ್ದು? ಅಪ್ಪನಾ? ಕೇಳಿದರು.
ಇಲ್ಲ ಅಪ್ಪ ನಾನು ಮಗುವಾಗಿದ್ದಾಗ ತೀರಿ ಹೋದ್ರು, ಅಮ್ಮನೇ ಫೀಸ್ ಕಟ್ಟಿದ್ದು ಹೇಳಿದ. ಅದಕ್ಕೆ ಬಾಸ್ ಅಮ್ಮ ಏನು ಕೆಲಸ ಮಾಡ್ತಾರೆ ಕೇಳಿದರು. ಅದಕ್ಕೆ, ಅಮ್ಮ ಬೇರೆಯವರ ಮನೆಯಲ್ಲಿ ಕೆಲಸದವರಾಗಿದ್ದಾರೆ ಎಂದು ಹೇಳಿದ.
ಸರಿ, ನಿನ್ನ ಕೈ ತೋರಿಸು ಎಂದರು, ಆತ ತೋರಿಸಿದ, ಶುದ್ಧವಾಗಿ, ಮೆತ್ತಗಿತ್ತು.
ಒಂದು ದಿನಕ್ಕೂ ಅಮ್ಮನಿಗೆ ನೀನು ಸಹಾಯ ಮಾಡೇ ಇಲ್ವಾ ಕೇಳಿದರು? ಆತ ಇಲ್ಲ ನನ್ನಮ್ಮ ಓದಲು ಹೇಳ್ತಿದ್ಲು ಒಂದು ದಿನಕ್ಕೂ ಕೆಲಸ ಮಾಡೋಕೆ ಬಿಟ್ಟಿಲ್ಲ ಎಂದ.
ಬಾಸ್ ಅಷ್ಟೇನೂ ಖುಷಿಯಾದಂತೆ ಕಾಣುತ್ತಿರಲಿಲ್ಲ. ಸರಿ ಮನೆಗೆ ಹೋಗಿ ನಿನ್ನ ಅಮ್ಮನ ಕೈ ನೋಡು, ಅದಕ್ಕೆ ಎಣ್ಣೆಯೇನಾದರೂ ಹಚ್ಚಿ ಮಸಾಜ್ ಮಾಡಿ ನಾಳೆ ಬಾ ಎಂದರು.
ಕೆಲಸಕ್ಕೂ ಅಮ್ಮನಿಗೂ, ಎಣ್ಣೆಗೂ ಏನು ಸಂಬಂಧ, ಇಲ್ಲಿ ಕೆಲಸ ಸಿಗೋದಿಲ್ಲ ಎಂದು ಆತ ಡಿಸೈಡ್ ಮಾಡಿದ.
ಆದರೂ ಬಾಸ್ ಮಾತು ಮನಸಿಗೆ ಕೊರಿತಾ ಇತ್ತು, ಅಮ್ಮನ ಕರೆದು ನಿನ್ನ ಕೈ ತೋರಿಸು ಎಂದ. ಅಮ್ಮನ ಕೈ ಕಪ್ಪಗೆ, ಕಠೋರವಾಗಿ, ಅಲ್ಲಲ್ಲಿ ಗಾಯಗಳೂ ಇದ್ದವು, ರಾಶಿ ಕಲೆಯೂ ಇತ್ತು.ಇದನ್ನು ನೋಡಿ ಮಗನಿಗೆ ಕಣ್ಣಲ್ಲಿ ನೀರು ಬಂತು, ನನ್ನ ಅಮ್ಮನ ಕೈ ನೋಡೋದಕ್ಕೆ ನಾನು ಇಷ್ಟು ವರ್ಷ ಕಾದೆನಾ ಎಂದು ನೋವು ಪಟ್ಟುಕೊಂಡ. ಕೆಲಸ ಗಳಿಸಿ ನಾನು ದುಡಿಯುತ್ತೇನೆ, ನೀನು ಕೆಲಸಕ್ಕೆ ಹೋಗಬೇಡ ಎಂದು ಹೇಳಿ ಮನೆಕೆಲಸ ಮಾಡಿ, ಅಡುಗೆ ಮಾಡಿ ಅಮ್ಮನಿಗೆ ತಿನ್ನಿಸಿದ.
ಮರುದಿನ ಬಾಸ್ ಬಳಿ ಬಂದು, ಹೇಳಿದ ಅಮ್ಮನ ಕೈ ನೋಡಿ, ಎಣ್ಣೆ ಹಚ್ಚಿದೆ. ನಾನು ಒಳ್ಳೆಯ ಮಗನಲ್ಲ ಎಂದ. ಆತನ ಕಣ್ಣಲ್ಲಿ ನೋವಿತ್ತು, ನೀರಿತ್ತು. ಕೆಲಸ ಸಿಗದ ನಿರಾಸೆಯೂ ಇತ್ತು.
ಬಾಸ್ ಇದೀಗ ನಿನ್ನನ್ನು ಮ್ಯಾನೇಜರ್ ಆಗಿ ಕೆಲಸಕ್ಕೆ ತೆಗೆದುಕೊಳ್ಳುತ್ತೇನೆ. ಒಬ್ಬ ಮ್ಯಾನೇಜರ್‌ನಲ್ಲಿ ಇತರರ ಸಹಾಯ ಗುರುತಿಸೋ, ಕಷ್ಟಕ್ಕೆ ಸ್ಪಂದಿಸೋ ಗುಣ ಇರಬೇಕು. ಈಗ ನಿನ್ನಲ್ಲಿ ಅದನ್ನು ಕಾಣುತ್ತಿದ್ದೇನೆ ಎಂದು ಹೇಳಿ ಬೆನ್ನು ತಟ್ಟಿದರು.
ನಿಮ್ಮ ತಂದೆ-ತಾಯಿ ಪರಿಶ್ರಮದಿಂದಲೇ ಇಂದು ನೀವು ಉನ್ನತ ಸ್ಥಾನದಲ್ಲಿದ್ದೀರಿ. ಅವರ ಪರಿಶ್ರಮ ಪೋಲಾಗಲು ಬಿಡಬೇಡಿ, ನಿಮ್ಮ ಒಳ್ಳೆತನ ಹೇಗೋ ಒಂದು ದಿನ ನಿಮ್ಮ ಕೈ ಹಿಡಿಯುತ್ತದೆ. ತಾಳ್ಮೆಯಿಂದ ಕಾಯಿರಿ..