ಹೆಣ್ಣುಮಕ್ಕಳಿಗೆ ಕಿರುಕುಳ ನೀಡಿದರೆ ಕಠಿಣ ಕ್ರಮ : ಪಿಎಸ್ಐ ಮನ್ನಾಬಾಯಿ

ಹೊಸದಿಗಂತ ವರದಿ ಬಾಗಲಕೋಟೆ:

ಶಾಲೆಗೆ ಹಾಗೂ ಹೊರಗಡೆ ಹೋಗುವ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ, ವಿದ್ಯಾರ್ಥಿನಿಯರಿಗೆ ಕಿರುಕುಳ, ದೌರ್ಜನ್ಯವೆಸಗಿದರೆ ಅಂತಹವರ ಮೇಲೆ ಪೊಲೀಸ್ ಇಲಾಖೆಯು ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ನವನಗರದ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಐ ಆರ್.ಎಲ್.ಮನ್ನಾಬಾಯಿ ಹೇಳಿದರು.

ಪೊಲೀಸ್ ಇಲಾಖೆಯ ವತಿಯಿಂದ ತಾಲ್ಲೂಕಿನ ಮುಚಖಂಡಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಪೋಕ್ಸ್ ಹಾಗೂ ಮಹಿಳಾ ದೌರ್ಜನ್ಯ ಕಾಯ್ದೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲೆಗೆ ಬರುವ ಸಂದರ್ಭದಲ್ಲಿ ಯಾರಾದರೂ ವಿದ್ಯಾರ್ಥಿ ನಿಯರನ್ನು ಪೀಡಿಸಿದರೆ ತಕ್ಷಣ ಶಿಕ್ಷಕರ ಗಮನಕ್ಕೆ ತರಬೇಕು. ಇಲ್ಲವಾದರೆ ಪೊಲೀಸ್ ಇಲಾಖೆಗೆ ಕರೆ ಮಾಡಿ ಹೇಳಿದರೆ ದೌರ್ಜನ್ಯವೆಸಗುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಮನೆಯಲ್ಲಿ ಬಾಲ್ಯವಿವಾಹ ಮಾಡಲು ಮುಂದಾದರೆ ಯಾವುದೇ ಕಾರಣಕ್ಕೂ ಮದುವೆಯಾಗಬೇಡಿ. ಬಾಲ್ಯವಿವಾಹ ಮಾಡಿದರೆ ನಮ್ಮ ಶಿಕ್ಷಕರ ಹಾಗೂ ಪೊಲೀಸರ ಗಮನಕ್ಕೆ ತರುತ್ತೇನೆ ಎಂದು ವಿದ್ಯಾರ್ಥಿ ನಿಯರು ಮುಲಾಜಿಲ್ಲದೇ ಹೇಳುವ ಮೂಲಕ ಧೈರ್ಯವಂತಾರಾಗಿ. ಸಣ್ಣ ವಯಸ್ಸಿನಲ್ಲಿ ಬಾಲ್ಯವಿವಾಹಕ್ಕೆ ಒಳಗಾಗದೇ ಉತ್ತಮ ಶಿಕ್ಷಣ ಪಡೆದುಕೊಂಡು ಗುರಿ ಸಾಧಿಸುವತ್ತ ಮುನ್ನಗ್ಗಬೇಕು ಎಂದರು.

ಮನೆಯ ಅಕ್ಕಪಕ್ಕದಲ್ಲಿ ಹಾಗೂ ನಿಮ್ಮ ಮನೆಯಲ್ಲಿ ಯಾರಾದಾರೂ ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದರೆ ತಕ್ಷಣ 112, 100, 1098ಗೆ ಉಚಿತ ಕರೆ ಮಾಡಿದರೆ ಬಾಲ್ಯ ವಿವಾಹ ತಡೆಯುವ ಕೆಲಸವನ್ನು ನಾವು ಮಾಡುತ್ತೇವೆ. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡುತ್ತೇವೆ. ಸಮಾಜದಲ್ಲಿ ಅನಿಷ್ಠ ಪದ್ಧತಿಯಾಗಿರುವ ಬಾಲ್ಯ ವಿವಾಹ ಪದ್ದತಿಯನ್ನು ದೂರ ಮಾಡಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ವಿದ್ಯಾರ್ಥಿ ಗಳಿಗೆ ತಿಳಿಸಿದರು.

ಚಿಕ್ಕ ವಯಸ್ಸಿನಲ್ಲಿಯೇ ಬೈಕುಗಳನ್ನು ವಿದ್ಯಾರ್ಥಿ ಗಳು ಓಡಿಸಿದರೆ ಅಪರಾಧವಾಗಲಿದೆ. 18 ವಯಸ್ಸು ಆದ ನಂತರ ಲೈಸೆನ್ಸ್ ಪಡೆದು ಹೆಲ್ಮೆಟ್ ಹಾಕಿಕೊಂಡು ವಾಹನ ಚಲಾಯಿಸಬೇಕು. ವಯಸ್ಸು ಆಗದೇ ಬೈಕು ಓಡಿಸುವಾಗ ಪೊಲೀಸ್ರ ಕೈಗೆ ಸಿಕ್ಕರೆ ನಿಮ್ಮ ಪಾಲಕರಿಗೆ 25 ಸಾವಿರ ದಂಡ, ಜೈಲು ಶಿಕ್ಷೆಯಾಗಲಿದೆ ವಿದ್ಯಾರ್ಥಿಗಳು ಈ ಬಗ್ಗೆ ಜಾಗೃತರಾಗಬೇಕು ಎಂದು ಹೇಳಿದರು.

ಶಾಲಾ ಮುಖ್ಯ ಶಿಕ್ಷಕ ಎಸ್.ಎಚ್.ಹಾದಿಮನಿ, ಶಿಕ್ಷಕರಾದ ಎಚ್.ಟಿ.ಕೋಡ್ಡಣ್ಣವರ, ಶಿವಣಗಿ, ಆರ್.ಕೆ.ಪಾಟೀಲ, ಪೊಲೀಸ್ ಇಲಾಖೆಯ ಸಿಬ್ಬಂದಿ ಕಾವೇರಿ ಅನಂತಪುರ, ಕಲಾವತಿ ಪ್ರಜಾರಿ, ವಿಜಯಲಕ್ಷ್ಮೀ ಮಲ್ಲಪ್ಪಗೋಳ, ಶೈಲಾ ತಡಸಿಯವರು ಇದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!