ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಇನ್ಮುಂದೆ ಮಚ್ಚು, ಲಾಂಗ್ ತೋರಿಸುವವರು, ಕಾನಾನು ಸುವ್ಯವಸ್ಥೆ ಹಾಳು ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಜೆಡಿಎಸ್ ನಾಯಕ ಎಸ್.ಎಲ್.ಭೋಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಜಿ.ಪರಮೇಶ್ವರ್ ಅವರು, ಕಳೆದ 2-3 ವರ್ಷಗಳ ಅವಧಿಯಲ್ಲಿ ನಡೆದಿರುವ ವಿವಿಧ ಅಪರಾಧ ಪ್ರಕರಣಗಳು, ಕೈಗೊಂಡ ಕ್ರಮ, ಅಪರಾಧಿಗಳ ಬಂಧನ ಕುರಿತು ಅಂಕಿ ಅಂಶಗಳ ಸಹಿತ ವಿವರಿಸಿ, ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಮಾಜದ ಶಾಂತಿ ಹಾಳು ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಗಲಭೆ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಗೂಂಡಾ ಕಾಯ್ದೆಯಡಿ ಮೂರು ವರ್ಷಗಳಲ್ಲಿ 139 ಗೂಂಡಾಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಪೊಲೀಸ್ ಠಾಣೆಗಳಲ್ಲಿ ಬೀಟ್ ವ್ಯವಸ್ಥೆ ಹೆಚ್ಚಿಸಲಾಗಿದೆ. ಹೊಯ್ಸಳ ಗಸ್ತು ಕರ್ತವ್ಯ ಬಲಪಡಿಸಲಾಗಿದೆ. ನಗರದ ಯಾವುದೇ ಸ್ಥಳದಿಂದ 112ಗೆ ಕರೆ ಮಾಡಿದರೆ ಸರಾಸರಿ 9 ನಿಮಿಷಗಳಲ್ಲಿ ಸ್ಥಳಕ್ಕೆ ಹೊಯ್ಸಳ ಬರುವ ವ್ಯವಸ್ಥೆ ಮಾಡಲಾಗಿದೆ.ವ್ಹೀಲಿಂಗ್ ಮಾಡುವುದಲ್ಲದೆ ಚಾಕು, ಚೂರಿ ಹಾಗೂ ಲಾಂಗ್ ಹಿಡಿದುಕೊಂಡು ಓಡಾಡಿ ಸಮಾಜದ ಸ್ವಾಸ್ಥ್ಯ ಕದಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಳೆದ ಮೂರು ವರ್ಷಗಳಲ್ಲಿ, 1,342 ಪ್ರಕರಣಗಳು ದಾಖಲಾಗಿದ್ದು, 1,046 ವ್ಯಕ್ತಿಗಳನ್ನು ಬಂಧಿಸಲಾಗಿದೆ.ರಾಜ್ಯದೆಲ್ಲೆಡೆ ದಾಖಲಾದ ಒಟ್ಟು ವ್ಹೀಲಿಂಗ್ ಪ್ರಕರಣಗಳಲ್ಲಿ ಬೆಂಗಳೂರು ನಗರದಲ್ಲಿ 893 ಪ್ರಕರಣ ದಾಖಲಾಗಿದ್ದು, 788 ಮಂದಿಯನ್ನು ಬಂಧಿಸಲಾಗಿದೆ. ರಾಜ್ಯದ ಇತರೆಡೆ 449 ಪ್ರಕರಣ ದಾಖಲಾಗಿದ್ದು, 258 ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದೇವೆಂದು ಹೇಳಿದರು.