September 28, 2026
Monday, September 28, 2026
spot_img

ಬಿಡದಿ ಟೌನ್‌ಶಿಪ್ ಯೋಜನೆಗೆ ತೀವ್ರ ವಿರೋಧ: ನಾಳೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಬೃಹತ್ ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಗೆ ಸ್ಥಳೀಯವಾಗಿ ಪ್ರತಿಭಟನೆಯ ಕಿಡಿ ಜೋರಾಗಿದೆ. ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಒಪ್ಪಿಸಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ, ಸಂತ್ರಸ್ತ ರೈತರ ಪರವಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಾಳೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

26 ಹಳ್ಳಿಗಳಲ್ಲಿ ಪಾದಯಾತ್ರೆ

ಬಿಡದಿ ಹೋಬಳಿಯ ರೈತರ ಜೀವನೋಪಾಯ ರಕ್ಷಿಸಲು ಹಾಗೂ ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಲು ಜೆಡಿಎಸ್ ಈ ಹೋರಾಟವನ್ನು ತೀವ್ರಗೊಳಿಸಿದೆ. ಈ ಕುರಿತು ಮಾಹಿತಿ ನೀಡಿರುವ ಮಾಜಿ ಶಾಸಕ ಎ. ಮಂಜುನಾಥ್, ನಾಳೆ ಬೆಳಗ್ಗೆ ಬಿಡದಿ ಹೋಬಳಿಯ ಅಂಚೀಪುರದಿಂದ ಹೊಸೂರು ಗ್ರಾಮದವರೆಗೆ ಈ ಬೃಹತ್ ಪಾದಯಾತ್ರೆ ಸಾಗಲಿದೆ ಎಂದು ತಿಳಿಸಿದ್ದಾರೆ. ಯೋಜನೆಯಿಂದ ಬಾಧಿತವಾಗಲಿರುವ ಸುಮಾರು 26 ಹಳ್ಳಿಗಳ ವ್ಯಾಪ್ತಿಯಲ್ಲಿ ಪಾದಯಾತ್ರೆ ಸಂಚರಿಸಲಿದ್ದು, ಸಾವಿರಾರು ರೈತರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

33,562 ಕೋಟಿ ಯೋಜನೆ ವಿರುದ್ಧ ನಿಖಿಲ್ ಆಕ್ರೋಶ

ಈಗಾಗಲೇ ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ನಿಖಿಲ್ ಕುಮಾರಸ್ವಾಮಿ, ಸುಮಾರು 470ಕ್ಕೂ ಹೆಚ್ಚು ದಿನಗಳಿಂದ ಬಡ ರೈತರು ತಮ್ಮ ಜಮೀನು ಉಳಿಸಿಕೊಡುವಂತೆ ಮನವಿ ಮಾಡುತ್ತಿದ್ದರೂ ಸರ್ಕಾರ ಮುಖ್ಯಸ್ಥರು ಅವರನ್ನು ಭೇಟಿ ಮಾಡಿಲ್ಲ. ಆದರೆ, ಕರಡು ಯೋಜನೆಗಳ ಹೆಸರಿನಲ್ಲಿ 33,562 ಕೋಟಿ ಮೊತ್ತದ ರಿಯಲ್ ಎಸ್ಟೇಟ್ ಭೂಸ್ವಾಧೀನಕ್ಕೆ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ರೈತರ ಆಸ್ತಿ ಮತ್ತು ಹಕ್ಕನ್ನು ಉಳಿಸಲು ಕಾನೂನಾತ್ಮಕವಾಗಿಯೂ ಹೋರಾಟ ಮುಂದುವರಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:

ಕಾಂಗ್ರೆಸ್ ಪ್ರತಿತಂತ್ರ – ಹಳ್ಳಿಗಳಲ್ಲಿ ಹೈ ಅಲರ್ಟ್

ಸರ್ಕಾರವು ಅಂತಿಮ ಭೂಸ್ವಾಧೀನದ ಅಧಿಸೂಚನೆ ಹೊರಡಿಸಿ, ಪರಿಹಾರದ ಚೆಕ್ ವಿತರಣೆಗೆ ಮುಂದಾಗುತ್ತಿದ್ದಂತೆ ಜೆಡಿಎಸ್ ಈ ಪಾದಯಾತ್ರೆಯ ತಂತ್ರ ಹೂಡಿದೆ. ಪ್ರತಿಭಟನೆಯ ಕಾವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಡದಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ನಾಳೆಯ ಪಾದಯಾತ್ರೆ ಭಾರಿ ರಾಜಕೀಯ ಸಂಚಲನಕ್ಕೆ ಕಾರಣವಾಗುವ ಸಾಧ್ಯತೆಯಿದೆ.

Must Read