ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ ಗೆದ್ದ ವಿದ್ಯಾರ್ಥಿಯೊಬ್ಬ ಬಹುಮಾನ ಪಡೆಯುವ ಕೆಲ ಕ್ಷಣಗಳಿಗೆ ಮೊದಲು ಆಟದ ಮೈದಾನದಲ್ಲೇ ಕುಸಿದುಬಿದ್ದು, ಸಾವನ್ನಪ್ಪಿದ ಆಘಾತಕಾರಿ ಘಟನೆ ತುಮಕೂರು ತಾಲೂಕಿನ ಚಿಕ್ಕತೊಟ್ಟಿಲು ಕೆರೆ ಬಳಿ ನಡೆದಿದೆ.
ಭೀಮಾಶಂಕರ್ (15) ಮೃತ ವಿದ್ಯಾರ್ಥಿ. ಈತ ಯಾದಗಿರಿ ಜಿಲ್ಲೆಯ ಸುರಪುರ ಗ್ರಾಮದ ನಿವಾಸಿಯಾಗಿದ್ದು, ತುಮಕೂರು ತಾಲೂಕಿನ ಬೆಳದರ ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದ.
ಚಿಕ್ಕತೊಟ್ಟಿಲು ಕೆರೆ ಬಳಿ ನಿನ್ನೆ ನಡೆದ ಹೋಬಳಿ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಆತ, ರಿಲೇ ಆಟದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದ. ಆದರೆ ಬಹುಮಾನ ಸ್ವೀಕರಿಸುವ ಕೆಲಕ್ಷಣಗಳಿಗೆ ಮೊದಲು ಕುಸಿದು ಬಿದ್ದಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ ಮಾರ್ಗಮಧ್ಯೆಯೇ ವಿದ್ಯಾರ್ಥಿಯು ಕೊನೆಯುಸಿರೆಳೆದಿದ್ದಾನೆ. ಸಾವಿಗೆ ಹೃದಯಾಘಾತ ಕಾರಣ ಎಂದು ಶಂಕಿಸಲಾಗಿದೆ.
ಇಂದು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮೃತ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕ ಮೃತದೇಹ ಪಾಲಕರಿಗೆ ಹಸ್ತಾಂತರವಾಗಲಿದೆ.
ಘಟನಾ ಸ್ಥಳಕ್ಕೆ ಕೋರಾ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.