Sunday, December 3, 2023

Latest Posts

ಹಿಂಸಾಚಾರಕ್ಕೆ ತಿರುಗಿದ ವಿದ್ಯಾರ್ಥಿ ಸಂಘಟನೆಯ ಪ್ರತಿಭಟನೆ: ದೀನ ದಯಾಳ್‌ ವಿಶ್ವವಿದ್ಯಾಲಯದಲ್ಲಿ ಲಾಠಿ ಚಾರ್ಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದ ಘೋರಕ್‌ಪುರದಲ್ಲಿರುವ ದೀನ್ ದಯಾಳ್ ಉಪಾಧ್ಯಾಯ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ವಿದ್ಯಾರ್ಥಿ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ ಹಿಂಸಾಚಾರಕ್ಕೆ ತಿರುಗಿದೆ.

ಶುಕ್ರವಾರ ನಡೆದ ಘರ್ಷಣೆಯಲ್ಲಿ ವಿವಿ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪೊಲೀಸರು ಗಾಯಗೊಂಡಿದ್ದಾರೆ. ಈ ನಡುವೆ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದಿರುವ ಘಟನಾವಳಿಗಳನ್ನು ಹೊಂದಿರುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಏನಿದು ಘಟನೆ?

ದೀನ್ ದಯಾಳ್ ಉಪಾಧ್ಯಾಯ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳ ಕುರಿತು ವರದಿ ನೀಡಲು ವಿದ್ಯಾರ್ಥಿ ಸಂಘಟನೆಗಳು ಉಪಕುಲಪತಿಗಳ ಭೇಟಿಗೆ ಮುಂದಾಗಿತ್ತು. ಆದರೆ ಈ ಭೇಟಿಗೆ ಕುಲಪತಿಗಳ ಅನುಮತಿ ಸಿಕ್ಕಿರಲಿಲ್ಲ. ಇದನ್ನು ಖಂಡಿಸಿ ಸಂಘಟನೆಯ ಕಾರ್ಯಕರ್ತರು ಜು.13ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಸಂಬಂಧಿಸಿ ನಾಲ್ವರು ವಿದ್ಯಾರ್ಥಿಗಳನ್ನು ವಿವಿ ಆಡಳಿತ ಅಮಾನತುಗೊಳಿಸಿತ್ತು. ಇದರ ಮುಂದುವರಿದ ಭಾಗವಾಗಿ ಶುಕ್ರವಾರ ಪ್ರತಿಭಟನೆ ಇನ್ನಷ್ಟು ತೀವ್ರತೆ ಪಡೆದುಕೊಂಡಿದೆ. ಒಂದು ಹಂತದಲ್ಲಿ ಕಾರ್ಯಕರ್ತರು ಹಾಗೂ ವಿವಿ ಸಿಬ್ಬಂದಿಗಳ ನಡುವೆ ಹೊಯ್‌ಕೈ ಹಂತ ತಲುಪಿದ್ದು, ಪರಿಸ್ಥಿತಿ ವಿಕೋಪಕ್ಕೆ ತೆರಳುವ ಸೂಚನೆ ಸಿಗುತ್ತಿದ್ದಂತೆಯೇ ಪೊಲೀಸರು ಮಧ್ಯಪ್ರವೇಶಿಸಿ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಈ ಘಟನೆಯಲ್ಲಿ ವಿವಿ ವೈಸ್ ಚಾನ್ಸೆಲರ್ ರಾಜೇಶ್ ಸಿಂಗ್, ರಿಜಿಸ್ಟ್ರಾರ್ ಅಜಯ್ ಸಿಂಗ್, ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಹಿಂಸಾಚಾರದಲ್ಲಿ ಹೊರಗಿನ ಶಕ್ತಿಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!