June 24, 2026
Wednesday, June 24, 2026
spot_img

ನೀಟ್ ಅವಾಂತರ ಖಂಡಿಸಿ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಹೊಸದಿಗಂತ ವರದಿ ಬೆಳಗಾವಿ:

ನೀಟ್ ಪರೀಕ್ಷೆಯಲ್ಲಿನ ಅವಾಂತರ ಮತ್ತು ಸರ್ಕಾರದ ಬೇಜವಾಬ್ದಾರಿತನದಿಂದ ನಡೆಯುತ್ತಿರುವ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಖಂಡಿಸಿ ಬುಧವಾರ ಎಐಡಿಎಸ್ಓ ನೇತೃತ್ವದ ಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯಿತು.

ನಗರದ ಚೆನ್ನಮ್ಮ ವೃತ್ತದಲ್ಲಿ ಹಲವಾರು ವಿದ್ಯಾರ್ಥಿಗಳು ಎನ್ ಟಿ ಎ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೋರಹಾಕಿದರು. ಚೆನ್ನಮ್ಮ ವೃತ್ತದಿಂದ ಮೆರವಣಿಗೆಯ ರ್ಯಾಲಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಲಿ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಮಹಾಂತೇಶ ಬಿಳೂರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಅವರು, “ಮೇ 3 ರಂದು ನಡೆದ ನೀಟ್ ಪ್ರಶ್ನೆಪತ್ರಿಕೆಯು ಮುಂಚಿತವಾಗಿಯೇ ಟೆಲಿಗ್ರಾಮ್ ನಲ್ಲಿ ಹರಿದಾಡಿತ್ತು. ಇಷ್ಟಾಗಿಯೂ ಎನ್ ಟಿ ಎ ಪರೀಕ್ಷೆ ನಡೆಸಿತು. ಇದಾದ ಕೆಲವೇ ದಿನಕ್ಕೆ ಪರೀಕ್ಷೆ ರದ್ದುಗೊಳಿಸಲಾಯಿತು. ವಿದ್ಯಾರ್ಥಿಗಳ ವರ್ಷಗಳ ಪರಿಶ್ರಮ ನೀರಿನಲ್ಲಿ ಹೋಮವಾಯಿತು. ಕೇಂದ್ರ ಸರ್ಕಾರ ಮತ್ತು ಎನ್ ಟಿ ಎ ಬೇಜವಾಬ್ದಾರಿತನದಿಂದ ಆಘಾತಕ್ಕೆ ಸಿಲುಕಿರುವ ವಿದ್ಯಾರ್ಥಿಗಳು ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ. ಜೂನ್ 21ರ ಮರುಪರೀಕ್ಷೆ ನಂತರ ಕೂಡ ಈ ಆತ್ಮಹತ್ಯೆಗಳು ಸಾಂಕ್ರಾಮಿಕವಾಗಿ ಹೆಚ್ಚುತ್ತಿವೆ. ಇಲ್ಲಿಯವರೆಗೂ ದೇಶದವ್ಯಾಪಿ 19 ವಿದ್ಯಾರ್ಥಿಗಳು ಜೀವ ತೊರೆದಿದ್ದಾರೆ. ದೇಶದಲ್ಲಿ ಕಳೆದ 10 ವರ್ಷಗಳಲ್ಲಿ 1.3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದೇ ಅವಧಿಯಲ್ಲಿ 1.5 ಲಕ್ಷ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ರೈತರ ಆತ್ಮಹತ್ಯೆಗಿಂತ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚುತ್ತಿವೆ. ಇವು ಆತ್ಮಹತ್ಯೆಯಲ್ಲ, ಸರ್ಕಾರ ಮತ್ತು ವ್ಯವಸ್ಥೆ ನಡೆಸಿದ ನರಮೇಧ” ಎಂದು ಅಸಮಾಧಾನ ಹೋರ ಹಾಕಿದರು.

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ ಸರ್ಕಾರ ತನ್ನ ವೈಫಲ್ಯವನ್ನು ಸರಿಪಡಿಸಿಕೊಳ್ಳದೇ ಟೆಲಿಗ್ರಾಮ್ ಬ್ಯಾನ್ ಮಾಡಿತು. ಹಾಗೂ ಮೆಡಿಕಲ್ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿರುವ ಎನ್ ಎಮ್ ಸಿ ದೇಶಾದ್ಯಂತ ಯಾವ ಮೆಡಿಕಲ್ ವಿದ್ಯಾರ್ಥಿಗಳಿಗೂ ಜೂನ್ 20 ಮತ್ತು 21 ರಂದು ರಜೆ ನೀಡದಂತೆ ಆದೇಶ ಹೊರಡಿಸಿದೆ. ಕೋಚಿಂಗ್ ಮಾಫಿಯಾದೊಂದಿಗೆ ಶಾಮಿಲ್ ಆಗಿರುವ ವ್ಯವಸ್ಥೆಯು ನೀಟ್ ಪೇಪರ್ ಸೋರಿಕೆಯ ಗೂಬೆಯನ್ನು ಮೆಡಿಕಲ್ ವಿದ್ಯಾರ್ಥಿಗಳ ತಲೆ ಮೇಲೆ ಹೊರೆಸುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರು.

ಇಂದು ಶಿಕ್ಷಣ ವ್ಯವಸ್ಥೆಯು ಸಂಪೂರ್ಣ ನಾಶವಾಗಿದೆ. ನೀಟ್ ಆರಂಭಿಸಿರುವುದೇ ಕೋಚಿಂಗ್ ಮಾಫಿಯಾಗಳ ವ್ಯಾಪಾರಕ್ಕೆ. ಅಸಮಾನ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನ ಸ್ಪರ್ಧೆ ಸಾಧ್ಯವಿಲ್ಲ. ಕೋಚಿಂಗ್ ಇಲ್ಲದೇ ನೀಟ್ ನಲ್ಲಿ ಸ್ಪರ್ಧಿಸಲಾಗದು. ಕೋಚಿಂಗಿಗಾಗಿ ಲಕ್ಷಾಂತರ ರೂ ಖರ್ಚು ಮಾಡಬೇಕು. ವಾರ್ಷಿಕ 1.4 ಲಕ್ಷ ಕೋಟಿಯಿರುವ ದೇಶದ ಶಿಕ್ಷಣ ಬಜೆಟ್ ಗೆ ಸಮಾನವಾಗಿ ದೇಶದ ಪಾಲಕರು ನೀಟ್ ಕೋಚಿಂಗಿಗೆ ಸುರಿಯಬೇಕಿದೆ.

ಇದನ್ನೂ ಓದಿ:

ಈ ವೆಚ್ಚ ಬರಿಸಲಾಗದ ಬಡಮಕ್ಕಳ ವೈದ್ಯಕೀಯದ ಕನಸನ್ನು ವ್ಯವಸ್ಥೆ ಕೊಂದಿದೆ. ವೈದ್ಯಕೀಯ ಶಿಕ್ಷಣವೇ ಇಷ್ಟು ದುಬಾರಿಯಾದಾಗ ವೈದ್ಯಕೀಯವು ಸೇವೆಯಾಗಿ ಉಳಿಯಲು ಸಾಧ್ಯವಿಲ್ಲ. ಕೇವಲ ಹಣವಂತರಿಗಷ್ಟೇ ಮೀಸಲಿಟ್ಟು ಅತ್ಯಂತ ವ್ಯವಸ್ಥಿತವಾಗಿ ಬಡವರಿಂದ ವೈದ್ಯಕೀಯ ಶಿಕ್ಷಣ ಮತ್ತು ಸೇವೆಯನ್ನು ಕಸಿಯಲಾಗಿದೆ. ಶಿಕ್ಷಣವನ್ನು ಜಾಗತಿಕ ಮಾರುಕಟ್ಟೆಯ ಸರಕಾಗಿಸಲಾಗಿದೆ. ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕಾರ್ಪೊರೇಟೀಕರಣದ ವಿರುದ್ಧ ವಿದ್ಯಾರ್ಥಿಗಳು ಒಂದಾಗಿ ಸಮರ ನಡೆಸಬೇಕು” ಎಂದು ಕರೆ ನೀಡಿದರು.

ಎಲ್ಲ ಅವಾಂತರಕ್ಕೆ ಕಾರಣವಾಗಿರುವ ಎನ್ ಟಿ ಎ ಅನ್ನು ಕೂಡಲೇ ರದ್ದುಗೊಳಿಸಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಪ್ರಕರಣದ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು. ಈ ಹಗರಣದಲ್ಲಿ ಭಾಗಿಯಾಗಿರುವವರನ್ನು ಕಂಡು ಹಿಡಿದು ನಿದರ್ಶನೀಯ ಶಿಕ್ಷೆ ವಿಧಿಸಬೇಕೆಂದು. ವಿದ್ಯಾರ್ಥಿಗಳು ಸರ್ಕಾರವನ್ನು ಆಗ್ರಹಿಸಿದರು.

ಈ ವೇಳೆ ಎಐಡಿಎಸ್ಓ ಸಂಘಟನಾಕಾರ ಶಾಂತೇಶ್ ನಂದಿಕೋಲಮಠ, ಸೇರಿದಂತೆ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !