ಎಡವಟ್ಟು ಮಾಡೋದು, ಸುಳ್ಳು ಹೇಳೋದು.. ಇದೇ ಸಿಎಂ ನಿತ್ಯದ ಕೆಲಸ: ಆರ್‌. ಅಶೋಕ್‌ ವ್ಯಂಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಸುಳ್ಳು ಹೇಳುತ್ತೀರಲ್ಲಾ, ತಮ್ಮ ಭಂಡತನಕ್ಕೆ ಏನು ಹೇಳೋಣ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.

ನಾಗರೀಕ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂಬ ವರದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಈ ಕುರಿತು ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿತ್ತು.

ಮೀಸಲಾತಿ ನೀಡಬೇಕೆಂಬ ಬೇಡಿಕೆ ಬಂದಿರುವುದು ನಿಜ. ಆದರೆ, ಈ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ತಿಳಿಸಲಾಗಿತ್ತು. ಸರ್ಕಾರದ ಸ್ಪಷ್ಟನೆ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಎಡವಟ್ಟು ಮಾಡೋದು, ಆಮೇಲೆ ಸುಳ್ಳು ಹೇಳೋದು… ಇದೇ ಸಿಎಂ ಸಿದ್ದರಾಮಯ್ಯ ಅವರ ದಿನಚರಿ ಎಂದು ಕಿಡಿಕಾರಿದ್ದಾರೆ.

ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಸುಳ್ಳು ಹೇಳುತ್ತೀರಲ್ಲಾ, ತಮ್ಮ ಭಂಡತನಕ್ಕೆ ಏನು ಹೇಳೋಣ? ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕೊಡಬೇಕು ಎಂದು ತಮ್ಮ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಮುಸ್ಲಿಂ ಶಾಸಕರು ಆಗಸ್ಟ್ 24, 2024 ರಂದು ತಮಗೆ ಪತ್ರ ಬರೆಯುತ್ತಾರೆ. ತಾವು ಅದೇ ದಿನವೇ ಈ ಪತ್ರವನ್ನ ಪರಿಶೀಲಿಸಿ ಮಂಡಿಸಿ ಎಂದು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಿದ್ದೀರಿ. ಈ ಸಂಬಂಧ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರಲೂ ಸಹ ತಾವು ಅನುಮೋದನೆ ನೀಡಿದ್ದೀರಿ.

ಇಷ್ಟೆಲ್ಲಾ ಪತ್ರ ವ್ಯವಹಾರ ನಡೆದಿದ್ದರೂ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಹಸಿ ಸುಳ್ಳು ಹೇಳುತ್ತಿರಲ್ಲ, ತಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ, ನೈತಿಕತೆ ಅನ್ನುವುದೇ ಇಲ್ಲವೇ? ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿ, ಬಾಯಿ ಬಿಟ್ಟರೆ ಬರಿ ಸುಳ್ಳು ಹೇಳುವ ತಮ್ಮನ್ನ ಆ ತಾಯಿ ಚಾಮುಂಡೇಶ್ವರಿ ಮೆಚ್ಚುತ್ತಾಳಾ? ತಮ್ಮನ್ನ ನಂಬಿ ಮತ ಹಾಕಿ ಅಧಿಕಾರ ಕೊಟ್ಟ ಕನ್ನಡಿಗರು ಕ್ಷಮಿಸುತ್ತಾರಾ? ಎಂದು ಕುಟುಕಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!