Saturday, February 4, 2023

Latest Posts

ಹೀಗಿತ್ತು ಕನ್ನಡ ನಾಡಿನೊಂದಿಗೆ ಅಜಾತಶತ್ರುವಿನ ನಂಟು!

ಹೊಸದಿಗಂತ ಡಿಜಿಟಲ್ ಡೆಸ್ಕ್

ಭಾರತ ಕಂಡ ಶ್ರೇಷ್ಠ ವ್ಯಕ್ತಿ, ಅತ್ಯುತ್ತಮ ಕವಿ, ವಾಗ್ಮಿ, ಅಜಾತಶತ್ರು ಎಂದೆ ಎಲ್ಲಡೆ ಖ್ಯಾತವಾದ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕನ್ನಡ ನಾಡಿನೊಂದಿಗೆ ವಿಶೇಷ ಅನುಬಂಧ ಬೆಳೆಸಿಕೊಂಡಿದ್ದರು. ಇಂದು ಅವರ 98ನೇ ಜನ್ಮದಿನ. ಅವರು ಇಹಲೋಕ ತ್ಯಜಿಸಿ 4ವರ್ಷಗಳಾದರೂ ಅವರ ಛಾಪು ಜನಮಾನಸದಲ್ಲಿ ಇನ್ನೂ ಅಚ್ಚಾಗಿ ಉಳಿದಿದೆ.

ಅಟಲ್ ಬಿಹಾರಿ ವಾಜಪೇಯಿ ಅವರ ಜೀವನದ ಪ್ರಮುಖ ಘಟನೆಗಳಿಗೆ ಕರ್ನಾಟಕ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಜನಸಂಘ ಹಾಗೂ ನಂತರ ಬಿಜೆಪಿ ಅಂಬೆಗಾಲಿಡುತ್ತಿದ್ದಾಗ, ’ಚಲೋ ಕರ್ನಾಟಕ ದೇಖೆಂಗೆ’ ಎಂದು ಬಂದವರಿವರು. ಈಗಲೂ ಅನೇಕ ಜನಪ್ರತಿನಿಧಿಗಳು ಅಟಲ್ ಜಿ ಅವರ ಮಾರ್ಗದರ್ಶನದಿಂದಲೇ ನಾವು ಸಂಸತ್ತು ಹಾಗೂ ವಿಧಾನಸಭೆಯ ಮೆಟ್ಟಿಲೇರಿದ್ದೇವೆ ಎಂದು ಅವರನ್ನು ಸ್ಮರಿಸುತ್ತಾರೆ.
ಉತ್ತರ ಕರ್ನಾಟಕದ ಪ್ರಮುಖ ಕೇಂದ್ರ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಗೂ ಅಟಲ್ ಜಿ ಅವರಿಗೂ 50 ವರ್ಷಗಳ ನಂಟು. 1968ರಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಆಗ ಮಹದೇವಸಾ ಜರತಾರಘರ ಎಂಬುವವರ ಮನೆಯಲ್ಲಿ ಉಳಿದುಕೊಂಡಿದ್ದರು. ಒಟ್ಟು 10 ಬಾರಿ ಹುಬ್ಬಳ್ಳಿಗೆ ಭೇಟಿ ನೀಡಿದ್ದರು ಅಟಲ್ ಜಿ. ನಂತರ ಮುಂದಿನ ದಿನಗಳಲ್ಲಿ ಅವರ ಕರ್ನಾಟಕ ಪ್ರವಾಸವೆಲ್ಲ ರಾಜ್ಯದಲ್ಲಿ ಬಿಜೆಪಿ ದೃಢಿಕರಿಸಲು, ಚುನಾವಣೆ ಪ್ರಚಾರ ಹಾಗೂ ಅಧಿಕೃತ ಪ್ರವಾಸಗಳಾಗಿದ್ದವು.

ಕರ್ನಾಟಕದ ಪ್ರವಾಸ ಅವರಿಗೆ ಎಲ್ಲಿಲ್ಲದ ಉತ್ಸಾಹ. ಒಮ್ಮೆ ಜೋಗ ಜಲಪಾತದ ರಮಣೀಯ ಸೌಂದರ್ಯ ಕಂಡ ಅಟಲ್ ಜಿ ಸ್ಥಳದಲ್ಲೇ ಅದರ ವರ್ಣನೀಯ ಶಾಯರಿ ಹೇಳಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸೆರೆವಾಸವಿದ್ದ ಅವರು, ಅದೇ ಸಮಯಕ್ಕೆ ಹಲವಾರು ಕವಿತೆಗಳನ್ನು ರಚಿಸಿದರು. ಚುನಾವಣಾ ಪ್ರಚಾರಕ್ಕೆಂದೆ ಕನ್ನಡ ಕಲಿಯಲಾರಂಭಿಸಿದರು. ಅಟಲ್ ಜಿ ವಿದೇಶಾಂಗ ಮಂತ್ರಿಗಳಾಗಿ ಶಿವಮೊಗ್ಗಕೆ ಭೇಟಿ ನೀಡಿದಾಗ ತಮಗೆ ಕಲ್ಪಿಸಿದ ಅಧಿಕೃತ ವ್ಯವಸ್ಥೆ, ನಿವಾಸ ತ್ಯಜಿಸಿ ಕಾರ್ಯಕರ್ತರ ಮನೆಯಲ್ಲಿ ಉಳಿದುಕೊಂಡಿದ್ದರು. ಅಟಲ್ ಜಿ ಇದ್ದರೆ ಅಲ್ಲಿ ಕಾರ್ಯಕರ್ತರ ದಂಡು, ಅಟಲ್ ಜಿ ಇದ್ದರೆ ಅಲ್ಲಿ ಅನೌಪಚಾರಿಕತೆ, ಹರಟೆ, ಅಟಲ್ ಜಿ ಇದ್ದರೆ ಕವನ ವಾಚನ, ಹಾಡು ಹಾಡುವುದು ಹೀಗೆ ತಮ್ಮ ಸುತ್ತಲಿನ ಪರಿಸರವನ್ನು ಸದಾ ಲವಲವಿಕೆಯಿಂದ ಇಟ್ಟುಕೊಳ್ಳುತ್ತಿದ್ದರು.

ಕರ್ನಾಟಕದಲ್ಲಿ ಒಂದೇ ದಿನ 18 ಕಡೆ ಭಾಷಣ ಮಾಡಿದ ದಣಿವರಿಯದ ನಾಯಕ ಇವರು. ಐವತ್ತೇ ಜನ ಇರಲಿ ಐದು ಸಾವಿರವಿರಲಿ ಅಟಲ್ ಅವರ ಭಾಷಣದ ಲಯ, ಭಾವ, ವಿಚಾರದ ಆಳತೆ ಎಂದಿಗೂ ವ್ಯತ್ಯಾಸವಾಗುತ್ತಿರಲಿಲ್ಲ. ಭಾಷಣ ಮಾಡುವುದು ಅವರಿಗೆ ಇಷ್ಟದ ಕಾರ್ಯವಾಗಿತ್ತು.

ಅಟಲ್ ಬಿಹಾರಿ ವಾಜಪೇಯಿ ಎಂಥಃ ವ್ಯಕ್ತಿಗಾದರೂ ಪ್ರೇರಣೆ ನೀಡಬಲ್ಲ ವ್ಯಕ್ತಿತ್ವ ಅವರದ್ದು. ಪಕ್ಷಾತೀತವಾಗಿ ಅವರ ಸಾಧನೆ, ರಾಷ್ಟ್ರದ ಏಳಿಗೆಗೆ ನೀಡಿದ ಕೊಡುಗೆಯನ್ನು ಅನೇಕರು ಮೆಚ್ಚಿ, ಗುಣಗಾನ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!