COVID UPDATES | ಆಮ್ಲಜನಕ, ಜೀವ ರಕ್ಷಕ ಸಾಧನ ಲಭ್ಯತೆ ಖಚಿತಪಡಿಸಿಕೊಳ್ಳಿ: ಕೇಂದ್ರದ ಖಡಕ್ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತಿನ ಕೆಲ ರಾಷ್ಟ್ರಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮುಂದೆ ಎದುರಾಗುವ ಯಾವುದೇ ಸವಾಲು ಎದುರಿಸಲು ಆಸ್ಪತ್ರೆಗಳಲ್ಲಿ ದ್ರವರೂಪದ ವೈದ್ಯಕೀಯ ಆಮ್ಲಜನಕ, ಸಿಲಿಂಡರ್‌ಗಳ ದಾಸ್ತಾನು, ವೆಂಟಿಲೇಟರ್‌ಗಳಂತಹ ಜೀವರಕ್ಷಕ ಸಾಧನಗಳ ಲಭ್ಯತೆ ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರವು ಶನಿವಾರ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಮುಖ್ಯವಾಗಿ ಆಮ್ಲಜನಕವನ್ನು ಉತ್ಪಾದಿಸುವ ಪ್ರೆಶರ್ ಸ್ವಿಂಗ್ ಅಡ್ಸಾರ್‌ಪ್ಷನ್ (ಪಿಎಸ್‌ಎ) ಘಟಕಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ಹಾಗೂ ಅವುಗಳನ್ನು ಪರಿಶೀಲಿಸಲು ನಿಯಮಿತ ಅಣಕು ಪ್ರದರ್ಶನ ನಡೆಸುವಂತೆ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ, ದೇಶದಲ್ಲಿ ಈಗ ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆ ಇದೆಯಾದರೂ ಮುಂದೆ ಎದುರಾಗುವ ಯಾವುದೇ ಸಂದರ್ಭಗಳನ್ನು ಎದುರಿಸಲು ವೈದ್ಯಕೀಯ ಮೂಲಸೌಕರ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಅತ್ಯಂತ ಮಹತ್ವದ್ದಾಗಿದೆ ಎಂದರು.
ಸಾಂಕ್ರಾಮಿಕ ನಿರ್ವಹಣೆಯ ಸಮಯದಲ್ಲಿ ವೈದ್ಯಕೀಯ ಆಮ್ಲಜನಕ ಪ್ರಮುಖ ಮತ್ತು ಅಗತ್ಯ ಸಂಪನ್ಮೂಲವಾಗಿದ್ದು, ಎಲ್ಲಾ ಕ್ಲಿನಿಕಲ್ ಸೆಟ್ಟಿಂಗ್‌ಗಳಲ್ಲಿ ಇವುಗಳ ಲಭ್ಯತೆ ಖಚಿತ ಪಡಿಸಿಕೊಳ್ಳುವುದು ಮುಖ್ಯ. ಕೊರೋನಾ ರೋಗಿಗಳ ಆರೈಕೆ ಮತ್ತು ಜೀವಗಳನ್ನು ಉಳಿಸಲು ವಿಶ್ವಾಸಾರ್ಹ ಆಮ್ಲಜನಕ ಪೂರೈಕೆ ನಿರ್ಣಾಯಕವಾಗಿದೆ ಎಂದು ಅಗ್ನಾನಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!