ಹೊಸದಿಗಂತ ವರದಿ,ಮಂಡ್ಯ:
ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ಬುಧವಾರ ಮೂರು ಹಸುಗಳು ಮೃತಪಟ್ಟು, 10ಕ್ಕೂ ಹೆಚ್ಚು ಹಸು ಹಾಗೂ ಕರುಗಳು ತೀವ್ರ ಅಸ್ವಸ್ಥಗೊಂಡಿವೆ.
ಗ್ರಾಮದ ಸೋಮಶೇಖರ್ ಎಂಬುವರಿಗೆ ಸೇರಿದ ಹಸುಗಳು ಸಾವನ್ನಪ್ಪಿದ್ದು, ಉಳಿದ ಜಾನುವಾರು ನಿತ್ರಾಣಗೊಂಡಿವೆ. ಈ ಹಿನ್ನೆಲೆಯಲ್ಲಿ ಪಶು ವೈದ್ಯರು ಚಿಕಿತ್ಸೆ ನೀಡಿದ್ದು, ಹಸು ಹಾಗೂ ಕರುಗಳ ಸ್ಥಿತಿ ಗಂಭೀರವಾಗಿರುವುದು ಕುಟುಂಬದ ಆತಂಕಕ್ಕೆ ಕಾರಣವಾಗಿದೆ.
ಹೈನುಗಾರಿಕೆಯನ್ನು ನಂಬಿ ಜೀವನ ಮಾಡುತ್ತಿರುವ ಸೋಮಶೇಖರ್, 15ಕ್ಕೂ ಹೆಚ್ಚು ಹಾಲು ಕರೆಯುವ ಹಸುಗಳನ್ನು ಸಾಕಾಣಿಕೆ ಮಾಡಿಕೊಂಡಿದ್ದಾರೆ. ಅಂತೆಯೇ ಪ್ರತಿನಿತ್ಯ ಡೇರಿಗೆ 150 ಲೀಟರ್ ಹಾಲು ಹಾಕುತ್ತಿದ್ದರು. ಬುಧವಾರ ಮುಂಜಾನೆ ಹಾಲು ಕರೆಯುವ ಮುನ್ನ ಹಸುಗಳಿಗೆ ಮೇವು ಮತ್ತು ತಿಂಡಿ ನೀಡಿದ್ದಾರೆ. ಇವುಗಳನ್ನು ತಿಂದ ಕೆಲವೊತ್ತಿನಲ್ಲಿ ಅಸ್ವಸ್ಥಗೊಂಡ ಹಸುಗಳು ಉಸಿರಾಟ ತೊಂದರೆ ಅನುಭವಿಸಿವೆ. ಇದರಿಂದ ಎಚ್ಚೆತ್ತ ಮನೆಯವರು ತಕ್ಷಣ ಪಶುವೈದ್ಯಾಕಾರಿಗೆ ಕರೆ ಮಾಡಿದ್ದು ಅವರು ಬಂದು ಚಿಕಿತ್ಸೆ ನೀಡಿದರೂ ಸಹ ಮೂರು ಹಸು ಸಾವನ್ನಪ್ಪಿವೆ.
ಪ್ರತಿನಿತ್ಯ ಒಂದು ಅವು 10 ಲೀಟರ್‌ಗೂ ಹೆಚ್ಚು ಹಾಲು ನೀಡುತ್ತಿದ್ದ ಹಸುಗಳು ಸಾವನ್ನಪ್ಪಿದ್ದು, ಪ್ರತಿ ಹಸು 1 ಲಕ್ಷ ರೂಗೂ ಹೆಚ್ಚು ಬೆಲೆಬಾಳುತ್ತಿದ್ದವು. ಅನಿರೀಕ್ಷಿತ ದುರಂತದಲ್ಲಿ ಹಲವು ಹಸುಗಳ ಸಾವನ್ನಪ್ಪಿರುವುದರಿಂದ ಹೈನುಗಾರಿಕೆ ನಂಬಿ ಬದುಕುತ್ತಿದ್ದ ಕುಟುಂಬಕ್ಕೆ ಲಕ್ಷಾಂತರ ರೂ ನಷ್ಟ ಉಂಟಾಗಿದ್ದು, ದಿಕ್ಕು ತೋಚದ ಪರಿಸ್ಥಿತಿಯಂತಾಗಿದೆ..