ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಹೋಟೆಲ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಡೆಸುತ್ತಿದ್ದ ಸಭೆಗೆ ಡಿಢೀರ್ ಓರ್ವ ವ್ಯಕ್ತಿ ನುಗ್ಗಿದ್ದು, ಆತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಕಾನ್ಪುರದ ಶಕ್ತಿ ಪ್ರಕಾಶ್ ಭಾರ್ಗವ್ ಎಂದು ಗುರುತಿಸಲಾಗಿದೆ. ಭಾರ್ಗವ್ ಅವರು ಭಾನುವಾರ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಹೋಟೆಲ್‌ನಲ್ಲಿ ಹೆಚ್ಚಿನ ಭದ್ರತೆಯಲ್ಲಿ ನಡೆಯುತ್ತಿದ್ದ ಸಭೆಗೆ ಪ್ರವೇಶಿಸಲು ನಕಲಿ ಮಾಧ್ಯಮ ಐಡಿಯನ್ನು ಬಳಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಯ ಪ್ರಕಾರ, ಭಾರ್ಗವ್ ಅವರು “ಲಾಲ್ ಇಮ್ಲಿ ಮಿಲ್ ಹಗರಣ” ಎಂದು ಕೂಗುವ ಮೂಲಕ ಸಭೆಗೆ ಅಡ್ಡಿಪಡಿಸಿದರು ಮತ್ತು ಕೇಂದ್ರ ಗೃಹ ಸಚಿವರ ಗಮನ ಸೆಳೆಯುವ ಪ್ರಯತ್ನದಲ್ಲಿ ತಮ್ಮ ಕೈಯಲ್ಲಿದ್ದ ಪೇಪರ್ ಗಳನ್ನು ಎಸೆದರು. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ, ಭಾರ್ಗವ್ ಅವರನ್ನು ಹಿಡಿದು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದರು. ಅವರು ಮೊದಲು ಸ್ಥಳದಿಂದ ಹೊರಕ್ಕೆ ಕರೆದೊಯ್ದರು.
ಭಾರ್ಗವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿಯಲ್ಲಿ ವಂಚನೆ ಮತ್ತು ಫೋರ್ಜರಿ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ.