ಹೊಸ ದಿಗಂತ ವರದಿ, ಬೆಳಗಾವಿ:
ಬಾಣಂತಿ ಹಾಗೂ ಶಿಶುಗಳ ಸಾವಿನ ಪ್ರಕರಣಗಳಿಂದ ಸುದ್ದಿಯಲ್ಲಿರುವ ಇಲ್ಲಿನ ಬಿಮ್ಸ್ ಆಸ್ಪತ್ರೆಗೆ ಲೋಕಾಯುಕ್ತ ಪೊಲೀಸರು ಬುಧವಾರ ದಿಢೀರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಬಿಮ್ಸ್ ಆಸ್ಪತ್ರೆಯಲ್ಲಿನ ಹಣಕಾಸು ಇಲಾಖೆ, ಸೂಪರ್ ಸ್ಪೇಷಾಲಿಟಿ ಬಗ್ಗೆ, ಸಿಬ್ಬಂದಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಆಸ್ಪತ್ರೆಯ ನ್ಯೂನ್ಯತೆ ಬಗ್ಗೆ ಮಾಹಿತಿ ಜೊತೆಗೆ ಬಾಣಂತಿಯರ ಸಾವಿನ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಸವಿಸ್ತಾರ ಮಾಹಿತಿಯನ್ನೂ ಕೂಡ ಲೋಕಾಯುಕ್ತ ಅಧಿಕಾರಿಗಳು ಪಡೆದುಕೊಂಡಿದ್ದಾರೆ.
ಇನ್ನು ಈ ಕುರಿತು ಮಾಹಿತಿ ನೀಡಿರುವ ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ, 2021 ರಿಂದ 2024 ರತನಕ ಮಾಹಿತಿ ಕೇಳಿದ್ದು, ಅದನ್ನು ಕೊಟ್ಟಿದ್ದೇವೆ. ಸರ್ಕಾರಿ ಇಲಾಖೆಗಳಿಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡುವುದು ವಾಡಿಕೆ. ಹೀಗಾಗಿ, ಇದೊಂದು ರೂಟಿನ್ ಭೇಟಿಯಾಗಿದ್ದು, ಕೇಳಿದ ಮಾಹಿತಿ ಕೊಟ್ಟಿದ್ದೇವೆ. ಅಲ್ಲದೇ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಸಿಬ್ಬಂದಿಗಳ ಕೊರತೆಯಿದ್ದು, ಈ ಕೊರತೆಯನ್ನು ನೀಗಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ನ್ಯೂರೋ ಸರ್ಜನ್ ಹಾಗೂ ನ್ಯೂರೋ ಪ್ಯುಜಿಸಿಯನ್ ಬಿಟ್ಟು ಎಲ್ಲಾ ಡಿಪಾರ್ಟ್ಮೆಂಟ್ ಪ್ರಾರಂಭ ಆಗಿದೆ ಎಂದು ಹೇಳಿದ್ದಾರೆ.
ಅಲ್ಲದೇ, ಕೋವಿಡ್ ಸಂದರ್ಭದಲ್ಲಿನ ಕಿಟ್ ವಿಚಾರವಾಗಿ ಮಾಹಿತಿ ಕೇಳಿದ್ದು, ಆಸ್ಪತ್ರೆಗೆ ಡಿಎಂಇ ಕಚೇರಿಯಿಂದ ಸರಬರಾಜು ಆಗಿರುವ ಮಾಹಿತಿ ನೀಡಲಾಗಿದೆ. ಪಿಪಿ ಕಿಟ್ ಬಳಕೆ ಆಗಿದೆ ಎನ್ನುವ ಕುರಿತು ಮಾಹಿತಿ ಕೇಳಿದ್ದಾರೆ. ಆದರೆ, ಬಿಮ್ಸ್ ಆಸ್ಪತ್ರೆಗೆ ಹೈರಿಸ್ಕ್ ಇರುವ ಬಾಣಂತಿಯರು ಬಂದು ದಾಖಲಾಗುತ್ತಾರೆ. ಹೀಗಾಗಿ, ಸ್ವಲ್ಪ ಸಮಸ್ಯೆ ಆಗುತ್ತಿದೆ ಎಂಬುದನ್ನು ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅಶೋಕ ಶೆಟ್ಟಿ ತಿಳಿಸಿದ್ದಾರೆ.