Tuesday, March 28, 2023

Latest Posts

ಪ್ರಧಾನಿ ಭೇಟಿಗೆ ಮಂಡ್ಯ ಸಂಪೂರ್ಣ ಕೇಸರಿಮಯ: ಸಾವಯವ ಬೆಲ್ಲ ಕೊಟ್ಟ ಸ್ವಾಗತಿಸಲಿದ್ದಾರೆ ಸುಮಲತಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿಯವರ ಸ್ವಾಗತಕ್ಕೆ ಸಕ್ಕರೆ ನಾಡು ಮಂಡ್ಯ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಗರದ ಹೃದಯ ಭಾಗದಲ್ಲಿ ಹಾದುಹೋಗಿರುವ ಬೆಂಗಳೂರು ಮೈಸೂರು ಹೆದ್ದಾರಿ ಸಂಪೂರ್ಣ ಕೇಸರೀಮಯವಾಗಿದೆ. ಮಂಡ್ಯ ನಗರದ ಮುಖ್ಯ ರಸ್ತೆಯಲ್ಲಿ ಕೇಸರಿ ಬಾವುಟ, ಫ್ಲೆಕ್ಸ್‌ಗಳು ತಲೆ ಎತ್ತಿವೆ. ಗೆಜ್ಜಲಗೆರೆಗೆ ಹೋಗುವ ಮಾರ್ಗ‌ ಮಧ್ಯದಲ್ಲಿ ಫ್ಲೆಕ್ಸ್ ಹಾಗೂ ಬಾವುಟದ ರಂಗು ಬಲು ಜೋರಿದೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ ಕಾರ‌್ಯಕ್ರಮಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರಮೋದಿಯವರನ್ನು ಸ್ವಾಗತಿಸಲು ಸಕಲ ರೀತಿಯ ಸಿದ್ಧತೆಗಳನ್ನೂ ಮಾಡಲಾಗಿದೆ. ಈಗಷ್ಟೇ ಬಿಜೆಪಿ ಘೋಷಣೆ ಮಾಡಿರುವ ಸುಮಲತಾ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲಿದ್ದಾರೆ. ಮಂಡ್ಯದ ಸಾವಯವ ಬೆಲ್ಲವನ್ನು ಉಡುಗೊರೆಯಾಗಿ ನೀಡಲಿದ್ದಾರೆ.

ರೋಡ್‌ ಶೋ

ಸುಮಾರು 1.8 ಕಿ.ಮೀ. ವ್ಯಾಪ್ತಿಯಲ್ಲಿ (ಪ್ರವಾಸಿ ಮಂದಿರದಿಂದ ನಂದಾ ಚಿತ್ರಮಂದಿರದವರೆಗೆ) ನಡೆಯುವ ರೋಡ್ ಶೋ ನಡೆಸುವ ಪ್ರಧಾನಿಗಳಿಗೆ ವಿಶೇಷ ಭದ್ರತೆ ಒದಗಿಸಲು ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಹಾಗೂ ಸಾವಿರಾರು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಮೋದಿ ರೋಡ್ ಶೋ ನಡೆಸುವ ಮಾರ್ಗದ ಪ್ರವಾಸಿ ಮಂದಿರದ ಬಳಿ ಸರ್ ಎಂ. ವಿಶ್ವೇಶ್ವರಯ್ಯ ಮಹಾದ್ವಾರ, ಜೆ.ಸಿ.ವೃತ್ತದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾದ್ವಾರ ಹಾಗೂ ಮೈಶುಗರ್ ವೃತ್ತದಲ್ಲಿ ಉರಿಗೌಡ ಮತ್ತು ದೊಡ್ಡ ನಂಜೇಗೌಡರ ಮಹಾದ್ವಾರವನ್ನು ನಿರ್ಮಾಣ ಮಾಡಲಾಗಿದೆ.

ರೋಡ್‌ ಶೋ ಬಳಿಕ ಸಮಾವೇಶಕ್ಕಾಗಿ ಅದ್ದೂರಿ ವೇದಿಕೆಯನ್ನು ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರಮೋದಿಯವರು ವೇದಿಕೆಯ ಹಿಂಬದಿಗೆ ಕಾರಿನಲ್ಲಿ ಆಗಮಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಹಿಂಭಾಗದಲ್ಲೇ ಹೆದ್ದಾರಿ ಪ್ರಾಧಿಕಾರದವರು ವಿನೂತನವಾಗಿ ನಿರ್ಮಿಸಿರುವ ಹೆದ್ದಾರಿಯ ಚಿತ್ರಪಟಗಳನ್ನೊಳಗೊಂಡ ವಿಶೇಷ ಮ್ಯೂಸಿಯಂನಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್‌ನ ದೃಶ್ಯಗಳನ್ನು ವೀಕ್ಷಿಸಲಿದ್ದಾರೆ. ಬಳಿಕ ವೇದಿಕೆ ಕಾರ‌್ಯಕ್ರಮದಲ್ಲಿ ಭಾಗವಹಿಸುವರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!