ಬೇಸಿಗೆ ಶಿಬಿರಗಳು ಪರಂಪರೆಯ ಕೊಂಡಿಯಾಗಬೇಕು: ನಟ ಪ್ರಥಮ್

ಹೊಸದಿಗಂತ ವರದಿ ಮೈಸೂರು:

ಬೇಸಿಗೆ ರಜಾ ಅವಧಿಯಲ್ಲಿ ಆಯೋಜಿಸಲ್ಪಡುವ ಬೇಸಿಗೆ ಶಿಬಿರಗಳು ವಾಣಿಜ್ಯ ಸ್ಪರ್ಶಕ್ಕೆ ಆದ್ಯತೆ ನೀಡದೇ ನಮ್ಮ ಮೂಲ ಪರಂಪರೆ, ಆಚಾರ-ವಿಚಾರಗಳು ಹಾಗೂ ಮೌಲ್ಯಯುತ ಬಾಲ್ಯವನ್ನು ಕಟ್ಟಿಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬೇಸಿಗೆ ಶಿಬಿರದ ಉಪಯುಕ್ತತೆ ಮಕ್ಕಳಿಗೆ ತಲುಪುವಂತಾಗಬೇಕೆಂದು ಬಿಗ್‌ಬಾಸ್ ಖ್ಯಾತಿಯ ಚಿತ್ರ ನಟ ಪ್ರಥಮ್ ಅಭಿಮತ ವ್ಯಕ್ತಪಡಿಸಿದರು.

ಮೈಸೂರಿನ ನೈಪುಣ್ಯ ಸ್ಕೂಲ್ ಆಫ್ ಎಕ್ಸ್‌ಲೆನ್ಸ್ ಆಯೋಜಿಸಿರುವ 21 ದಿನಗಳ ಬೇಸಿಗೆ ಬಂಡಿ ಶಿಬಿರ ಎಂಬ ಹೆಸರಿನಲ್ಲಿ ಆಯೋಜಿಸಲಾಗಿರುವ ಬೇಸಿಗೆ ಶಿಬಿರದ ಕಾರ್ಯಕ್ರಮವನ್ನು ಜಾನಪದ, ಮೆರವಣಿಗೆಯ ಮೂಲಕ ಉದ್ಘಾಟಿಸಿದ ನಂತರ ಅವರು ಮಾತನಾಡಿದರು.

ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಜಗತ್ತು ವೇಗವಾಗಿ ಓಡುತ್ತಿದ್ದು, ಆಧುನಿಕ ತಂತ್ರಜ್ಞಾನಗಳು ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಮೂಲೆಗುಂಪು ಮಾಡುತ್ತಿವೆ. ಮಕ್ಕಳಿಗೆ ಸಹಜ ಬಾಲ್ಯ ದೊರಕುತ್ತಿಲ್ಲ. ಬಾಲ್ಯದ ಸವಿ ಅನುಭವಿಸಬೇಕಾದ ಮಕ್ಕಳು ಮೊಬೈಲ್, ಟ್ಯಾಬ್‌ಗಳ ಲೋಕದಲ್ಲಿ ಮುಳುಗಿ ಹೋಗಿದ್ದಾರೆ. ಇದರಿಂದ ನಮ್ಮ ಮಕ್ಕಳ ಸ್ವಾಭಾವಿಕ ಬೆಳವಣಿಗೆ ಹಾಗೂ ಭವಿಷ್ಯದಲ್ಲಿ ಅವರು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದ್ದರಿಂದ ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಸಂಸ್ಕೃತಿಯನ್ನು ಬಿತ್ತುವ ಹಾಗೂ ಪರಂಪರೆಯನ್ನು ಬೆಳೆಸುವ ಚಟುವಟಿಕೆಗಳು ಶಿಕ್ಷಣದ ಭಾಗವಾಗಬೇಕು. ಆಗ ಮಾತ್ರ ನೈಜ ಶಿಕ್ಷಣ ಎಂದು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ನಾವು ಒಪ್ಪಬಹುದಾಗಿದೆ. ಇಂಥ ಸುಧಾರಣೆ ಹಾಗೂ ಬದಲಾವಣೆಗೆ ಪೋಷಕರ ಸಹಕಾರ ಹಾಗೂ ಸಹಭಾಗಿತ್ವ ಸಹ ಶಿಕ್ಷಣ ಸಂಸ್ಥೆಗೆ ಅವಶ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞ ಆರ್.ರಘು ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ನೈಪುಣ್ಯ ಶಿಕ್ಷಣ ಸಂಸ್ಥೆ ಒಂದು ವಿಭಿನ್ನತೆ ಕಂಡುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಘಾಟನಾ ಮೆರವಣಿಗೆಯಲ್ಲಿ ಶಿಬಿರಾರ್ಥಿ ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಟ್ಟು ಹಳ್ಳಿಗಾಡಿನ ಸವಿ ಅನುಭವಿಸುವ ನಿಟ್ಟಿನಲ್ಲಿ ಎತ್ತಿನಗಾಡಿಗಳಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿದರು. ವಿವಿಧ ಜನಪದ ನೃತ್ಯ ಹಾಗೂ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

ನೈಪುಣ್ಯ ಶಾಲೆಯ ಬೇಸಿಗೆ ಬಂಡಿಯ ಈ ಕಾರ್ಯಕ್ರಮ ಆರಂಭದಲ್ಲಿ ದೇಶಿಯ ಉತ್ತೇಜನಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಂಪೂರ್ಣ ಜನಪದ ಚಟುವಟಿಕೆಗೆ ಒತ್ತು ಕೊಟ್ಟಿದ್ದು ಗಮನ ಸೆಳೆಯಿತು. ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಶೋಭಿತಾ ಸಂಸ್ಥೆಯ ಕಾರ್ಯದರ್ಶಿ ಆರ್.ಕೌಟಿಲ್ಯ, ಸಂಯೋಜಕಿ ಡಾ. ಶಾಲಿನಿ ,ಅಧ್ಯಾಪಕ ವರ್ಗ ಹಾಗೂ ಶಿಬಿರದ ವಿವಿಧ ಸಂಪನ್ಮೂಲ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನೂರಾರು ಪೋಷಕರು ಮಕ್ಕಳೊಂದಿಗೆ ತಾವು ಹೆಜ್ಜೆ ಹಾಕಿ ಮೆರವಣಿಗೆಗೆ ಮೆರಗು ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!