ಶಿವಮೊಗ್ಗದಲ್ಲಿ ಮೂವರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಗೆ ಸಮನ್ಸ್ ಜಾರಿ !

ಹೊಸದಿಗಂತ ವರದಿ ಶಿವಮೊಗ್ಗ:

ಅಚ್ಚರಿಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಕ್ಕೆ ಆಗಮಿಸುತ್ತಿರುವ ಬೆನ್ನಲ್ಲೇ ಮೂವರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಗೆ ಸಮನ್ಸ್‌ ಜಾರಿ ಮಾಡಲಾಗಿದೆ.

ಸಂಭವನೀಯ ಶಾಂತಿ ಭಂಗದ ಮಾಹಿತಿ ಆಧರಿಸಿ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಈ ಸಮನ್ಸ್‌ ಹೊರಡಿಸಿದ್ದಾರೆ.  ದೊಡ್ಡಪೇಟೆ ಪೊಲೀಸರ ಕೋರಿಕೆ ಮೇರೆಗೆ ಸಮನ್ಸ್‌ ಜಾರಿ ಮಾಡಿರುವುದಾಗಿ ಸಮನ್ಸ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಸಮನ್ಸ್‌ನಲ್ಲಿ ಯಾವುದೇ ನಿರ್ದಿಷ್ಟ ಕಾರಣಗಳನ್ನು ತೋರಿಸಿಲ್ಲ.

ಸಿಎಂಗೆ ಸ್ವಾಗತ ಎಂದಿದ್ದಕ್ಕೆ ಸಮನ್ಸ್‌…?

2018 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಕ್ಕೆ ಭೇಟಿ ನೀಡಿದ್ದರು. ಆಗ ಮುಖ್ಯಮಂತ್ರಿಗಳು ಸಾಗುತ್ತಿದ್ದ ರಸ್ತೆಗೆ ದಿಢೀರ್ ನುಗ್ಗಿದ್ದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಕಪ್ಪುಪಟ್ಟಿ ಪ್ರದರ್ಶನ ಮಾಡಿದ್ದರು. ಇದು ಆಗ ಪೊಲೀಸರ ಆಕ್ರೋಶಕ್ಕೂ ಕಾರಣವಾಗಿತ್ತು.

ಜನವರಿ 12 ರಂದು ಯುವನಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರೋರ್ವರು 2018ರಲ್ಲಿ ಕಪ್ಪುಪಟ್ಟಿ ಪ್ರದರ್ಶನ ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಮುಖ್ಯಮಂತ್ರಿಗಳಿಗೆ ಸುಸ್ವಾಗತ ಎಂದು ಬರೆದುಕೊಂಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪೊಲೀಸರು ತಾಲೂಕು ದಂಡಾಧಿಕಾರಿಗಳ ಮೂಲಕ ಸಮನ್ಸ್‌ ಜಾರಿ ಮಾಡಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!