ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಗನ ಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಹಾಗೂ ಅಮೆರಿಕದ ಬುಚ್ ವಿಲ್ಮೋರ್ ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದಲೇ ಮತ ಚಲಾಯಿಸಲಿದ್ದಾರೆ!
ಈ ಬಗ್ಗೆ ಮಾಧ್ಯಮಗಳೊಂದಿಗೆ ಬಾಹ್ಯಾಕಾಶದಿಂದಲೇ ನೇರ ಸಂವಾದ ನಡೆಸಿರುವ ಸುನೀತಾ, ನಮ್ಮ ಜವಾಬ್ದಾರಿ ನಿರ್ವಹಿಸುವುದು ಎಲ್ಲಕ್ಕಿಂತ ಮುಖ್ಯ. ಈ ಪರೀಕ್ಷಾರ್ಥ ಹಾರಾಟದ ಬಗ್ಗೆ ನಮಗೆ ಮೊದಲೇ ತಿಳಿದಿತ್ತು. ಜೊತೆಗೆ ಇದು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂಬುದೂ ಗೊತ್ತಿತ್ತು. ಈ ವೇಳೆಗಾಗಲೇ ನಾವು ಮನೆಯವರ ಜೊತೆ ಇರಬೇಕಿತ್ತು. ಅದೂ ವಿಶೇಷವಾಗಿ ನನ್ನ ತಾಯಿಯ ಜೊತೆ ಇರಬೇಕಿತ್ತು ಆದರೆ ಕಾರಣಾಂತರಗಳಿಂದ ಸ್ವಲ್ಪ ತಡವಾಗುತ್ತಿದೆ. ಆದರೆ ಅಂತ್ಯಂತ ತಂಪಾಗಿರುವ ಬಾಹ್ಯಾಕಾಶದಿಂದಲೇ ಈ ಬಾರಿ ಮತಚಲಾಯಿಸಲು ನಾನು ಕಾತರಳಾಗಿದ್ದೇನೆ ಎಂದು ಃಹೇಳಿಕೊಂಡಿದ್ದಾರೆ. ಜೊತೆಗೆ ಚುನಾವಣೆಯಲ್ಲಿ ಪ್ರತಿಯೊಬ್ಬ ನಾಗರಿಕ ಕೂಡಾ ಮತ ಚಲಾಯಿಸಬೇಕು ಎಂದೂ ಕರೆ ನೀಡಿದ್ದಾರೆ.
ಇದೇ ವೇಳೆ ತಾನು ಹಾಗೂ ವಿಲ್ಮೋರ್ ಯಾವ ಪಕ್ಷಕ್ಕೆ ಬೆಂಬಲ ಸೂಚಿಸುತ್ತೇವೆ ಎಂಬುದನ್ನು ಮಾತ್ರ ಅವರು ಬಹಿರಂಗಪಡಿಸಲಿಲ್ಲ. ಆದರೆ ಬಾಹ್ಯಾಕಾಶದಿಂದ ಮತ ಚಲಾಯಿಸಲು ಅನುಕೂಲ ಮಾಡಿಕೊಡುವಂತೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಜೂನ್ ಮೊದಲ ವಾರದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಸುನೀತಾ ಹಾಗೂ ಬುಚ್ ವಿಲ್ಮೋರ್ ಅವರನ್ನು ತಾಂತ್ರಿಕ ಕಾರಣಗಳಿಂದಾಗಿ 2025ರ ಜನವರಿಯಲ್ಲಿ ಭೂಮಿಗೆ ವಾಪಸ್ ಕರೆತರುವ ಯೋಜನೆಯನ್ನು ನಾಸಾ ಹಾಕಿಕೊಂಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ