ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 48 ಗಂಟೆಗಳಲ್ಲಿ ಅಧಿಕಾರಿಗಳ ತಂಡ ಮಳೆ ಪೀಡಿತ ಪ್ರದೇಶಗಳಲ್ಲಿ ನಿರಂತರವಾಗಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದೆ. ಈಗ ಪರಿಹಾರ ಕಾರ್ಯ ನಡೆಯುವುದು ಮುಖ್ಯವೇ ಹೊರತು, ನಾನು ಸ್ಥಳಕ್ಕೆ ಭೇಟಿ ನೀಡುವುದಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಬೆಂಗಳೂರಿನ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ ಎಂಬ ಪ್ರತಿಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, ನಾನು ಭೇಟಿ ನೀಡುವುದು ಮುಖ್ಯವಲ್ಲ. ಕೆಲಸಗಳನ್ನು ಮಾಡಬೇಕಾಗಿದೆ. ನಾನು ಭೇಟಿ ಮಾಡಿದರೆ ಪ್ರಚಾರ ಸಿಗುತ್ತದೆ. ನಮಗೆ ಪ್ರಚಾರ ಮುಖ್ಯವಲ್ಲ. ಈ ಪರಿಸ್ಥಿತಿ ಉದ್ಭವಿಸಿರುವ ಸ್ಥಳಗಳನ್ನು ಗುರುತಿಸಲು ಮತ್ತು ದೀರ್ಘಕಾಲೀನ ಪರಿಹಾರಗಳನ್ನು ನೀಡಲು ನಾವು ಸಮಿತಿಯನ್ನು ರಚಿಸಿದ್ದೇವೆ ಎಂದು ಹೇಳಿದರು.
ಸೋಮವಾರ ಸಂಜೆ ಸುರಿದ ಮಳೆ ನನಗೂ ಅಚ್ಚರಿ ಮೂಡಿಸಿದೆ. ಚಳ್ಳಕೆರೆಯಿಂದ ಬರುವಾಗ ನೆಲಮಂಗಲ ಬಳಿಯ ಸೇತುವೆ ಮೇಲೆ 2 ಅಡಿ ನೀರು ಇತ್ತು. ನಮ್ಮ ಅಧಿಕಾರಿಗಳು ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ 48 ಗಂಟೆಗಳಿಂದ ಮಳೆ ಪೀಡಿತ ಪ್ರದೇಶಗಳಲ್ಲಿದ್ದಾರೆ. ಈ ಕ್ಷಣದಲ್ಲಿ ನಾನು ಅವರನ್ನು ಮುಜುಗರಕ್ಕೀಡು ಮಾಡಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.