ಅಂಗನವಾಡಿ ಕೇಂದ್ರಗಳಿಗೆ ಕೊಳೆತ ಮೊಟ್ಟೆ ಸರಬರಾಜು: ಟೆಂಡರ್’ದಾರರಿಗೆ ನೊಟೀಸ್

ಹೊಸದಿಗಂತ ವರದಿ,ಕುಶಾಲನಗರ :

ಕುಶಾಲನಗರ ತಾಲೂಕಿನ ಅನೇಕ ಅಂಗನವಾಡಿ ಕೇಂದ್ರಗಳಿಗೆ ಈ ಬಾರಿ ಕೊಳೆತ ಮೊಟ್ಟೆಗಳನ್ನು ವಿತರಣೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಟೆಂಡರ್’ದಾರರಿಗೆ ನೋಟೀಸ್ ಜಾರಿ ಮಾಡಲಾಗಿದೆ.

ಕುಶಾಲನಗರ ತಾಲೂಕಿನ ಕೂಡಿಗೆ, ಬಸವನತ್ತೂರು ಸೇರಿದಂತೆ ಅನೇಕ ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿ ಮಹಿಳೆಯರು, ಬಾಣಂತಿಯರಿಗೆ ಮತ್ತು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಈಗಾಗಲೇ ಮೊಟ್ಟೆಗಳನ್ನು ವಿತರಿಸಲಾಗಿದೆ.

ಆದರೆ ಅ ಮೊಟ್ಟೆಗಳನ್ನು ಮನೆಗೆ ಒಯ್ದು ಬೇಯಿಸಿದಾಗ ಅದರ ಒಳ ಭಾಗ ಕಪ್ಪು ಬಣ್ಣದಲ್ಲಿರುವುದರ ಜೊತೆಗೆ ದುರ್ವಾಸನೆಯಿಂದ ಕೊಂಡಿರುತ್ತದೆ ಎಂದು ಆ ಭಾಗದ ಅನೇಕ ಮಹಿಳೆಯರು ಆರೋಪಿಸಿದ್ದಾರೆ.

ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಸರಬರಾಜು ಮಾಡುವ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ರಾಜ್ಯದ ಮಟ್ಟದಲ್ಲಿ ಟೆಂಡರ್ ನಡೆದಿದ್ದು, ವಿಜಯಪುರ ಜಿಲ್ಲೆಯ ತಾಳಿಕೋಟೆಯವರು ಟೆಂಡರ್ ಪಡೆದಿರುವುದಾಗಿ ಹೇಳಲಾಗಿದೆ. ಆದರೆ ಈ ಬಾರಿ ವಿತರಣೆ ಮಾಡಿರುವ ಮೊಟ್ಟೆಗಳ ಗುಣಮಟ್ಟ ತೀರಾ ಕಳಪೆಯಾಗಿರುವುದಾಗಿ ಆರೋಪಿಸಿರುವ ಫಲಾನಿಭವಿಗಳು ಉತ್ತಮವಾದ ಮೊಟ್ಟೆಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ.

ಈಗಾಗಲೇ ಕಳಪೆ ಗುಣಮಟ್ಟದ ಮೊಟ್ಟೆಗಳನ್ನು ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕಿನ ಕೆಲವು ಭಾಗಗಳ ಅಂಗನವಾಡಿ ಕೇಂದ್ರಗಳಿಗೆ ಟೆಂಡರ್’ದಾರರು ವಿತರಣೆ ಮಾಡಿರುವುದಾಗಿ ಜಿಲ್ಲಾ ಕಚೇರಿಗೆ ದೂರು ಬಂದ ಹಿನ್ನೆಲೆಯಲ್ಲಿ ಟೆಂಡರ್’ದಾರನಿಗೆ ಇಲಾಖೆಯ ವತಿಯಿಂದ ನೋಟೀಸ್ ನೀಡಲಾಗಿದೆ. ಅಲ್ಲದೆ ಬದಲಿ ಮೊಟ್ಟೆಗಳನ್ನು ನೀಡುವಂತೆ ಸೂಚನೆ ಕೂಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!