ಹೊಸದಿಗಂತ ಡಿಜಿಟಲ್ ಡೆಸ್ಕ್:
ಓಣಂ ಹತ್ತಿರವಾಗುತ್ತಿದ್ದಂತೆಯೇ ಕೇರಳದ ನಾಗರಿಕ ಪೂರೈಕೆ ಇಲಾಖೆ ಅಧೀನದ ಸಪ್ಲೈಕೋ, ಅಕ್ಕಿ, ಬೇಳೆ, ಸಕ್ಕರೆ ಬೆಲೆಯನ್ನು ಏರಿಕೆ ಮಾಡಿದ್ದು ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಶಾಕ್ ನೀಡಿದೆ. ಕೇಜಿಯೊಂದಕ್ಕೆ 30 ರೂ. ಇದ್ದ ಕುರುವಾ ಅಕ್ಕಿ ಬೆಲೆ 33ರೂ. ಗೆ ಹೆಚ್ಚಿಸಲಾಗಿದೆ.
ಕೇಜಿಯೊಂದಕ್ಕೆ 26ರೂ. ಇದ್ದ ಬೆಳ್ತಿಗೆ ಅಕ್ಕಿಯ ಬೆಲೆ 29ರೂ.ಗೆ ಏರಿಕೆಯಾಗಿದೆ. ಕೇಜಿಯೊಂದಕ್ಕೆ 111ರೂ. ಇದ್ದ ತೊಗರಿ ಬೇಳೆಯ ಬೆಲೆ 115, ಕೇಜಿಯೊಂದಕ್ಕೆ 27 ರೂ. ಇದ್ದ ಸಕ್ಕರೆ ಬೆಲೆಯನ್ನು ಬರೋಬ್ಬರಿ 33 ರೂ.ಗಳಿಗೆ ಹೆಚ್ಚಿಸಲಾಗಿದೆ.
ಓಣಂ ಹಬ್ಬದ ಸಂದರ್ಭದಲ್ಲಿಯೇ ಕೈಗೊಂಡಿರುವ ಈ ಕ್ರಮ ಕೇರಳದ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಈ ಬೆಳವಣಿಗೆಗೆ ಪ್ರತಿಕ್ರಿಯೆ ನೀಡಿರುವ ನಾಗರಿಕ ಪೂರೈಕೆ ಖಾತೆ ಸಚಿವ ಜಿ.ಆರ್. ಅನಿಲ್, ಏಳು ವರ್ಷಗಳ ಬಳಿಕ ಬೆಲೆ ಏರಿಕೆ ಮಾಡಲಾಗಿದೆ. ಮುಕ್ತ ಮಾರುಕಟ್ಟೆಗೆ ಹೋಲಿಸಿದರೆ ಈಗಲೂ ಬೆಲೆ ಶೇ. 30 ಕಡಿಮೆ ಇದೆ ಎಂದಿದ್ದಾರೆ, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸಪ್ಕೈಕೋಗೆ ಸರ್ಕಾರ ಇತ್ತೀಚೆಗಷ್ಟೆ 225 ಕೋಟಿ ರೂ. ಮಂಜೂರು ಮಾಡಿತ್ತು. ಇದರಲ್ಲಿ 140 ಕೋಟಿ ರೂ. ಈಗಾಗಲೇ ನೀಡಲಾಗಿದೆ.