ಮೀಸಲಾತಿ ಹೆಚ್ಚಳ ಸೇರಿ ಜನರಿಗೆ ನ್ಯಾಯ ಕೊಟ್ಟ ಬಿಜೆಪಿಯನ್ನು ಬೆಂಬಲಿಸಿ: ಮಂಡ್ಯದಲ್ಲಿ ಸಿಟಿ ರವಿ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಂಡ್ಯ ಯಾರ ಜಹಗೀರೂ ಅಲ್ಲ. ಮಂಡ್ಯದ ಜನರು ಸ್ವಾಭಿಮಾನಿ ಜನ ಎಂಬ ಸಂದೇಶವನ್ನು ನೀಡಬೇಕಾಗಿದೆ ಎಂದು ಮಂಡ್ಯದಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮನವಿ ಮಾಡಿದರು.
ಹಾಲಿಗೆ ಸಬ್ಸಿಡಿ ಕೊಟ್ಟದ್ದು ಬಿಜೆಪಿಯೇ ಹೊರತು ಕಾಂಗ್ರೆಸ್, ಜೆಡಿಎಸ್ ಅಲ್ಲ. ಕಿಸಾನ್ ಸಮ್ಮಾನ್ ಯೋಜನೆಯನ್ನೂ ನಾವೇ ಜಾರಿಗೊಳಿಸಿದೆವು. ಜನಧನ್ ಖಾತೆ, ಆಯುಷ್ಮಾನ್, ಯಶಸ್ವಿನಿ ಯೋಜನೆ ಮರುಜಾರಿ, ಶೌಚಾಲಯ ಯೋಜನೆ, ಗ್ಯಾಸ್ ಸಂಪರ್ಕ ಎಲ್ಲರಿಗೂ ಕೊಟ್ಟೆವು. ನಾವು ಜಾತಿ ನೋಡಿಲ್ಲ. 2 ಸಕ್ಕರೆ ಕಾರ್ಖಾನೆ ಪುನರಾರಂಭ ಮಾಡಿದ್ದು, ಸುಮ್ಮನೆ ನ್ಯಾಯ ಕೇಳುತ್ತಿಲ್ಲ. ಮೀಸಲಾತಿ ಹೆಚ್ಚಳ ಸೇರಿ ಜನರಿಗೆ ನ್ಯಾಯ ಕೊಟ್ಟ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಮೂಡಲಬಾಗಿಲ ಹನುಮಪ್ಪ- ಮುಲ್ಲಾಸಾಬಿಗೂ ನಡುವಿನ ಚುನಾವಣೆ ಇದು. ಹನುಮಪ್ಪನಿಗೆ ನ್ಯಾಯ ಕೊಡಲು ನಿಮ್ಮ ಮತ ಇರಲಿ. ಹನುಮಪ್ಪನಿಗೆ ನ್ಯಾಯ ಕೊಡಲು ತಯಾರಿದ್ದೀರಾ ಎಂದು ಪ್ರಶ್ನಿಸಿದರು. ಟಿಪ್ಪು ವರ್ಸಸ್ ಒಡೆಯರ್ ಚುನಾವಣೆ ಇದು ಎಂದು ನೆನಪಿಸಿದರು. ಉರಿಗೌಡ, ದೊಡ್ಡನಂಜೇಗೌಡರ ರಕ್ತ ನಮ್ಮಲ್ಲಿ ಹರಿಯುತ್ತಿದೆ. ಉರಿಗೌಡ, ದೊಡ್ಡನಂಜೇಗೌಡರ ಪ್ರತಿಮೆ ನಿರ್ಮಾಣ ಆಗಬೇಕಿದೆ ಎಂದು ತಿಳಿಸಿದರು.
ಕನ್ನಡದ ಬದಲು ಪರ್ಶಿಯನ್ ಭಾಷೆಯನ್ನು ಆಡಳಿತ ಭಾಷೆಯಾಗಿ ಹೇರಿದ ಮತಾಂಧ ಟಿಪ್ಪು ಕನ್ನಡ ಪ್ರೇಮಿ ಆಗುವುದು ಹೇಗೆ? ಮೈಸೂರನ್ನು ನಜರಾಬಾದ್, ಮಡಿಕೇರಿಯನ್ನು ಜಫಾರಾಬಾದ್, ಹಾಸನವನ್ನು ಕೈಮಾಬಾದ್ ಎಂದು ಕರೆದಿದ್ದು ಅದೇ ಟಿಪ್ಪು ಅಲ್ಲವೇ ಎಂದು ನೆನಪು ಮಾಡಿದರು. ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಎಂಬುದು ನೆನಪಿರಲಿ ಎಂದು ತಿಳಿಸಿದರು.
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಸಿ.ಎನ್. ಅಶ್ವತ್ಥನಾರಾಯಣ್ ಅವರು ಮಾತನಾಡಿ, ಸಿಎಂ ಯಡಿಯೂರಪ್ಪ ಅವರನ್ನು ಕೊಟ್ಟ ನಾಡು ಮಂಡ್ಯವು ಆರ್ಥಿಕ- ಸಾಮಾಜಿಕ- ಅಭಿವೃದ್ಧಿ ವಿಚಾರದಲ್ಲಿ ಹಿನ್ನಡೆ ಸಾಧಿಸಿದೆ. ಅವಕಾಶ ಕೊಟ್ಟ ಜನರಿಗೆ ಜೆಡಿಎಸ್ ನಾಯಕರು ಕಥೆಗಳನ್ನು ಹೇಳಿಕೊಂಡು ನಂಬಿಕೆದ್ರೋಹ ಮಾಡಿದ್ದಾರೆ. ಮೈಶುಗರ್ ಮುಚ್ಚಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಹಳೆ ಮೈಸೂರಿಗೆ ಜೆಡಿಎಸ್ ಪಕ್ಷ ಅನ್ಯಾಯ ಮಾಡಿತ್ತು ಎಂದು ಟೀಕಿಸಿದರು.
ಕಣ್ಣೀರು, ನಾಟಕ ಮಾಡುತ್ತ ಬಂದ ಜೆಡಿಎಸ್ ಪಕ್ಷಕ್ಕೆ ಈ ಬಾರಿ ಪಾಠ ಕಲಿಸಬೇಕು. ಕಾಂಗ್ರೆಸ್- ಜೆಡಿಸ್ ಗಳು ಕುಟುಂಬಕ್ಕೆ ಸೀಮಿತ ಪಕ್ಷಗಳು. ಹಿಂದುತ್ವ ಗೌರವ ನೀಡದ ಪಕ್ಷಗಳಿವು. ಆದ್ದರಿಂದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡಲು 2023ರ ಚುನಾವಣೆಯಲ್ಲಿ ಮಂಡ್ಯ- ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!