ಮಂಡ್ಯದಲ್ಲಿ ಬಿಜೆಪಿಗೆ ಅತ್ಯಧಿಕ ಸ್ಥಾನ ಸಿಗುವುದು ಖಚಿತ: ಸಿಎಂ ಬೊಮ್ಮಾಯಿ ವಿಶ್ವಾಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕರ್ನಾಟಕದೆಲ್ಲೆಡೆ ಬಿಜೆಪಿ ಗಾಳಿ ಬೀಸುತ್ತಿದೆ. 2023ರಲ್ಲಿ ಅದು ಸುನಾಮಿಯಾಗಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಮಂಡ್ಯದ ಎಂ.ಸಿ. ರಸ್ತೆ, ಪ್ರವಾಸಿ ಮಂದಿರ ಹತ್ತಿರದ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ಇಂದು ಏರ್ಪಡಿಸಿದ್ದ ಬಿಜೆಪಿ “ಜನಸಂಕಲ್ಪ ಸಮಾವೇಶ”ದಲ್ಲಿ ಮಾತನಾಡಿದ ಅವರು, ಮೋದಿಜಿ ಅವರ ನೇತೃತ್ವದಲ್ಲಿ ಭಾರತವು ವಿಶ್ವಮಾನ್ಯ ರಾಷ್ಟ್ರವಾಗಿದೆ. ಭಾರತದ ಕಾಶ್ಮೀರದ ಸಮಸ್ಯೆ, ನಕ್ಸಲೈಟ್ ಸಮಸ್ಯೆ ಸೇರಿ ಎಲ್ಲ ಸಮಸ್ಯೆಗಳನ್ನು ಅಮಿತ್ ಶಾ ಅವರು ಬಗೆಹರಿಸಿದ್ದಾರೆ. ಅಮಿತ್ ಶಾ ಅವರ ನೇತೃತ್ವದಲ್ಲಿ ಚುನಾವಣಾ ತಂತ್ರಗಾರಿಕೆಗೆ ಸದಾ ಯಶಸ್ಸು ಸಿಕ್ಕಿದೆ. 2023ರ ಮೇ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ನುಡಿದರು.
ಕಾಂಗ್ರೆಸ್- ಜೆಡಿಎಸ್ ಈ ಭಾಗಕ್ಕೆ ನ್ಯಾಯ ಕೊಟ್ಟಿಲ್ಲ. ಜನರು ಈ ಪಕ್ಷಗಳ ಬಗ್ಗೆ ಬೇಸತ್ತಿದ್ದಾರೆ. ಈ ಬಾರಿ ಮಂಡ್ಯದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಪಡೆಯಲಿದೆ. ಈ ಭಾಗದ ನೀರಾವರಿ ಯೋಜನೆಗಳಿಗೆ ನಮ್ಮ ಸರಕಾರ ಕಾಯಕಲ್ಪ ನೀಡಲಿದೆ. ಮೈಶುಗರ್ ಕಾರ್ಖಾನೆಯನ್ನು ಸರಕಾರವೇ ಮತ್ತೆ ಪ್ರಾರಂಭಿಸಿದೆ. ರೈತರು, ಕಬ್ಬು ಬೆಳೆಗಾರರಿಗೆ ಆತ್ಮವಿಶ್ವಾಸ ತುಂಬಿದ್ದೇವೆ. ಕಾರ್ಖಾನೆಯಲ್ಲಿ ಮುಂದೆ ಎಥೆನಾಲ್ ತೆಗೆಯಲಿದ್ದೇವೆ ಎಂದು ತಿಳಿಸಿದರು.
ಎಥೆನಾಲ್ ಇಲ್ಲದ ಕಾರ್ಖಾನೆಗಳಲ್ಲೂ ಕಬ್ಬು ಪ್ರತಿ ಟನ್‍ಗೆ 100 ರೂ. ಹೆಚ್ಚಳ ಮಾಡುವ ಆದೇಶ ಹೊರಡಿಸಿದ್ದೇನೆ. ಯೋಗ್ಯ ಬೆಲೆ ಕೊಟ್ಟು ಬಂದಿದ್ದೇನೆ. ಮಾತು ಕೊಟ್ಟಂತೆ ನಡೆಯುವ ಸರಕಾರ ನಮ್ಮದು. ಇಡೀ ಕರ್ನಾಟಕದ ಅಭಿವೃದ್ಧಿ ನಮ್ಮ ಸಂಕಲ್ಪ ಎಂದು ತಿಳಿಸಿದರು.
ಸೂಪರ್ ಫಾಸ್ಟ್ ರೈಲು, ಹೈವೇ ನೀಡಿದ ಪಕ್ಷ ಬಿಜೆಪಿ. ಕಾಂಗ್ರೆಸ್ ಕೇವಲ ದೌರ್ಭಾಗ್ಯ ನೀಡಿತ್ತು. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಪಕ್ಷ. ಬಿಬಿಎಂಪಿ, ಬಿಡಿಎ, ಸಣ್ಣ ನೀರಾವರಿಯಲ್ಲಿ ಮಾತ್ರವಲ್ಲದೆ ಹಾಸ್ಟೆಲ್‍ಗಳ ದಿಂಬು ಹಾಸಿಗೆಯಲ್ಲೂ ಭ್ರಷ್ಟಾಚಾರ ಇವರದು. ಅನ್ನ ಭಾಗ್ಯದಲ್ಲೂ ಕನ್ನ ಭಾಗ್ಯ ಇವರದಾಗಿತ್ತು ಎಂದು ಟೀಕಿಸಿದರು. ಕರ್ನಾಟಕದ ನೈಜ ಅನ್ನದಾತ ನರೇಂದ್ರ ಮೋದಿ ಅವರು ಎಂದು ವಿವರಿಸಿದರು.
ರೈತ ವಿದ್ಯಾನಿಧಿಯಿಂದ 10 ಲಕ್ಷ ಕುಟುಂಬಗಳಿಗೆ ಪ್ರಯೋಜನವಾಗಿದೆ. ಗ್ರಾಮೀಣ ಕರಕುಶಲಕರ್ಮಿಗಳಿಗೆ ನೆರವಾಗಿದ್ದೇವೆ. ಸ್ತ್ರೀಶಕ್ತಿ ಸಂಘಗಳಿಗೆ ಸ್ವಾವಲಂಬನೆಗೆ ನೆರವು ಕೊಟ್ಟಿದ್ದೇವೆ. ಕಾಂಗ್ರೆಸ್ಸಿಗರ ಕೇವಲ ಭಾಷಣದಿಂದ ಸಾಮಾಜಿಕ ನ್ಯಾಯ ಲಭಿಸುವುದಿಲ್ಲ ಎಂದು ಟೀಕಿಸಿದರು.
ಮೀಸಲಾತಿ ಹೆಚ್ಚಿಸಿ ನಾವು ಸಾಮಾಜಿಕ ನ್ಯಾಯ ಕೊಟ್ಟಿದ್ದೇವೆ. ಸಕಾರಾತ್ಮಕ, ಸಾಮರಸ್ಯ, ಅಭಿವೃದ್ಧಿಗಾಗಿ ನಾವು ಶ್ರಮಿಸಿದ್ದೇವೆ. ಕಾಂಗ್ರೆಸ್- ಜೆಡಿಎಸ್ ಪಕ್ಷಗಳ ಅಭಿವೃದ್ಧಿಶೂನ್ಯ ಕಪ್ಪು ಬಿಳುಪು ಸಿನಿಮಾ ನೋಡಿದ್ದೀರಿ ಎಂದ ಅವರು, ಬಿಜೆಪಿ ಈ ಭಾಗದ ಕರ್ನಾಟಕವನ್ನು ಸುವರ್ಣ ಕರ್ನಾಟಕ ಮಾಡಲಿದೆ ಎಂದು ತಿಳಿಸಿದರು. ನಮಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. ನಿಮ್ಮ ವಿಶ್ವಾಸಕ್ಕೆ ಚ್ಯುತಿ ಆಗದಂತೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವ ಅಮಿತ್ ಶಾ ಅವರು ಸಮಾವೇಶವನ್ನು ಉದ್ಘಾಟಿಸಿ ಮಾರ್ಗದರ್ಶನ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ಮಾತನಾಡಿ, ಮಂಡ್ಯದಲ್ಲಿ ಪರಿವರ್ತನೆ ಆಗಿದೆ. ಮುಂದಿನ ಚುನಾವಣೆಯಲ್ಲಿ 7ಕ್ಕೆ ಏಳೂ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ನುಡಿದರು.
ಕಣ್ಣೀರಿನ ರಾಜಕೀಯ ನಿಂತು ಅಭಿವೃದ್ಧಿಯ ರಾಜಕೀಯ ಇಲ್ಲಿ ಆರಂಭವಾಗಲಿದೆ. ಶ್ರಮಜೀವಿಗಳು, ರೈತರ ಹೆಸರಿನಲ್ಲಿ ಇಲ್ಲಿ ರಾಜಕೀಯ ಮಾಡಿದ್ದರು. ಆದರೆ, ಮಣ್ಣಿನ ಮಗ ಯಡಿಯೂರಪ್ಪ ಅವರು ರೈತರಿಗೆ ನೆರವು ಒದಗಿಸಿದವರು ಎಂದು ವಿವರಿಸಿದರು.
ರಾಜ್ಯದ ಸಚಿವ ಕೆ.ಸಿ. ನಾರಾಯಣಗೌಡ ಅವರು ಮಾತನಾಡಿ, ಮಂಡ್ಯದಲ್ಲಿ 4ರಿಂದ 5 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗೊಡ್ಡು ಬೆದರಿಕೆಗೆ ನಾವು ಮಣಿಯುವುದಿಲ್ಲ. ಬಿಜೆಪಿ ಎಂದರೆ ಅಭಿವೃದ್ಧಿಯ ಸಂಕೇತ. ಅದು ಕೆಲಸ ಮಾಡುತ್ತಿರುವ ವೈಖರಿಯನ್ನು ಜನತೆ ಗಮನಿಸಿದ್ದಾರೆ ಮತ್ತು ಬಿಜೆಪಿಯನ್ನು ಗೆಲ್ಲಿಸುವುದು ಖಚಿತ ಎಂದು ತಿಳಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ರಾಜ್ಯದ ನೀರಾವರಿ ಸಚಿವ ಗೋವಿಂದ ಕಾರಜೋಳ, ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್, ಮೈಸೂರು ಸಂಸದ ಪ್ರತಾಪಸಿಂಹ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣ, ಬಿ.ವೈ.ವಿಜಯೇಂದ್ರ, ಎಂ.ರಾಜೇಂದ್ರ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮಂಡ್ಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕರಾದ ರಾಮದಾಸ್, ನಾಗೇಂದ್ರ, ಡಾ|| ಹರ್ಷವರ್ಧನ್, ಎನ್ ಮಹೇಶ್, ನಿರಂಜನ್ ಕುಮಾರ್, ಪ್ರೀತಂ ಗೌಡ, ವಿಭಾಗ ಪ್ರಭಾರಿ ಎಂ.ವಿ. ರವಿಶಂಕರ್, ವಿಧಾನಪರಿಷತ್ ಸದಸ್ಯ ಮುನಿರಾಜು ಗೌಡ, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಮಂಡ್ಯ ಜಿಲ್ಲೆ ಅಧ್ಯಕ್ಷ ಸಿ.ಪಿ. ಉಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಮುಖಂಡರುಗಳಾದ ಶ್ರೀಮತಿ ಲಕ್ಷ್ಮೀ ಅಶ್ವಿನ್ ಗೌಡ, ಡಾ|| ಸಿದ್ದರಾಮಯ್ಯ, ಎಸ್ ಸಚ್ಚಿದಾನಂದ್, ಡಾ|| ಇಂದ್ರೇಶ್, ಎಸ್.ಸಿ. ಸ್ವಾಮಿ, ಮುನಿರಾಜು, ಸೋಮಶೇಖರ್, ನಂಜುನಿ ಗೌಡ, ಎನ್ ಶಿವಣ್ಣ, ಅಶೋಕ್ ಜಯರಾಮ್ ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!