ಹೊಸದಿಗಂತ ಡಿಜಿಟಲ್ ಡೆಸ್ಕ್:
ಜುಲೈ 20ರಿಂದ 25ರವರೆಗೆ ದೇಶದಾದ್ಯಂತ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿ ದಾಖಲಾಗಿದ್ದ FIRಗಳನ್ನು ಮುಂದುವರಿಸದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ದೇಶದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಅವಧಿಯ ಪ್ರತಿಭಟನೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತನಿಖೆ ನಡೆಸಬಾರದು ಮತ್ತು ಎಲ್ಲ FIRಗಳನ್ನು ಮುಚ್ಚಬೇಕು ಎಂದು ಕೋರ್ಟ್ ಸೂಚಿಸಿದೆ.
ಆರ್ಟಿಕಲ್ 142 ಅಡಿಯಲ್ಲಿ ವಿಶೇಷ ಆದೇಶ
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು, ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದ ಆರ್ಟಿಕಲ್ 142 ಅಡಿಯಲ್ಲಿ ಈ ವಿಶೇಷ ಆದೇಶ ನೀಡಿದೆ. ಇದೇ ವೇಳೆ ಜುಲೈ 20-25ರ ಪ್ರತಿಭಟನೆಗಳಿಗೆ ಸಂಬಂಧಿಸಿ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಹೊಸ FIR ದಾಖಲಿಸಬಾರದು ಎಂದು ಸ್ಪಷ್ಟಪಡಿಸಿದೆ.
ಆದರೆ ಜಂತರ್‌ಮಂತರ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 2,873 ಮಂದಿಗೆ ಸಂಬಂಧಿಸಿದ ಒಂದು FIR ಮುಂದುವರಿಸಲು ದೆಹಲಿ ಪೊಲೀಸರಿಗೆ ಕೋರ್ಟ್ ಅನುಮತಿ ನೀಡಿದೆ. ಈ ವ್ಯಕ್ತಿಗಳ ವಿರುದ್ಧ ಗಂಭೀರ ಅಪರಾಧ ಹಿನ್ನೆಲೆ ಇರುವುದನ್ನು ಪರಿಗಣಿಸಿ ಈ ವಿನಾಯಿತಿ ನೀಡಲಾಗಿದೆ.



