ಜೆಡಿಎಸ್ ಅಭ್ಯರ್ಥಿ ಗೌರಿಶಂಕರ್‌ಗೆ ಬಿಗ್ ರಿಲೀಫ್: ಚುನಾವಣೆಗೆ ಸ್ಪರ್ಧಿಸಲು ಸುಪ್ರೀಂ ಸಮ್ಮತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ಕರ್ನಾಟಕ ವಿಧಾನಭೆ ಚುನಾವಣೆ ತಯಾರಿಯಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಡಿಸಿ ಗೌರಿಶಂಕರ್‌ಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಈ ಬಾರಿಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಹೀಗಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಗೌರಿಶಂಕರ್​ ನಿಟ್ಟುಸಿರು ಬಿಟ್ಟಿದ್ದಾರೆ.

2018ರ ಚುನಾವಣೆಯಲ್ಲಿ ಮತದಾರರಿಗೆ ವಿಮಾ ಪಾಲಿಸಿಯ ನಕಲಿ ಬಾಂಡ್ ವಿತರಿಸಿದ ಕೇಸ್‌ಗೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್​ ಶಾಸಕ ಗೌರಿಶಂಕರ್​ ಅವರನ್ನು ಹೈಕೋರ್ಟ್​ ಏಕಸದಸ್ಯ ಪೀಠ ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಶಾಸಕ ಗೌರಿಶಂಕರ್​ ಪರ ವಕೀಲರು ಒಂದು ತಿಂಗಳ ಕಾಲ ಆದೇಶಕ್ಕೆ ತಡೆ ನೀಡುವಂತೆ ಕೋರ್ಟ್​ಗೆ ಮನವಿ ಮಾಡಿದ್ದರು. ಹೀಗಾಗಿ ಕೋರ್ಟ್​ ಒಂದು ತಿಂಗಳ ಕಾಲ ಆದೇಶಕ್ಕೆ ತಡೆ ನೀಡಿತ್ತು.

ಹೈಕೋರ್ಟ್​ ನೀಡಿದ ಒಂದು ತಿಂಗಳ ಅವಧಿಯಲ್ಲಿ ಗೌರಿಶಂಕರ್​ ಅವರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿ ಹೈಕೋರ್ಟ್​ ನೀಡಿರುವ ತೀರ್ಪಿಗೆ ತಡೆ ತರಬೇಕಿತ್ತು. ಇಲ್ಲದಿದ್ದರೆ ಅನರ್ಹ ಎಂಬ ಭೀತಿಯಲ್ಲಿರಬೇಕಿತ್ತು. ಹೀಗಾಗಿ ಗೌರಿ ಶಂಕರ್ ಅವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್, ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. ಇದರಿಂದ ಗೌರಿ ಶಂಕರ್​ಗೆ ಇದ್ದ ಆತಂಕ ಸದ್ಯದ ಮಟ್ಟಿಗೆ ದೂರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!