ಜ್ಞಾನವಾಪಿ ಸಮೀಕ್ಷೆಯು ಪೂಜಾಸ್ಥಳಗಳ ಕಾಯ್ದೆಯ ಉಲ್ಲಂಘನೆ ಅಲ್ಲ, ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಲಿ- ಸುಪ್ರೀಂಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜ್ಞಾನವಾಪಿ ಮಸೀದಿಯಲ್ಲಿ ವೀಡಿಯೋ ಸಮೀಕ್ಷೆ ಮಾಡಿರುವುದು ಪೂಜಾ ಸ್ಥಳಗಳಿಗೆ ಸಂಬಂಧಿಸಿದ ಕಾಯ್ದೆಯ ಉಲ್ಲಂಘನೆಯಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯ ಪಟ್ಟಿದೆ.

ಮಸೀದಿಯಲ್ಲಿ ಸರ್ವೇಕ್ಷಣೆ ಮಾಡುವಂತೆ ವಾರಾಣಸಿ ನ್ಯಾಯಾಲಯ ಆದೇಶಿಸಿರುವುದು 1991ರ ಪೂಜಾ ಸ್ಥಳಗಳಿಗೆ ಸಂಬಂಧಿಸಿದ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಮುಸ್ಲಿಮರು ಸುಪ್ರಿಂ ಕೋರ್ಟ್‌ ನಲ್ಲಿ ವಾರಾಣಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸರ್ವೋಚ್ಛ ನ್ಯಾಯಾಲಯದ ಪೀಠವು ʼಧಾರ್ಮಿಕ ಸ್ಥಳದ ಸ್ವರೂಪವನ್ನು ನಿರ್ಣಯಿಸುವುದು ಯಾವುದೇ ಪೂಜಾಸ್ಥಳಗಳ ಕಾಯ್ದೆಯ ಉಲ್ಲಂಘನೆಯಾಗುವುದಿಲ್ಲʼ ಎಂದು ಸ್ಪಷ್ಟಪಡಿಸಿದೆ.

ಇನ್ನು ಮಸೀದಿಯ ಸರ್ವೇಕ್ಷಣೆಯ ಕುರಿತು ವಿಚಾರಣೆಯು ವಾರಾಣಸಿ ಜಿಲ್ಲಾ ಕೋರ್ಟ್‌ ಗೆ ಸ್ಥಳಾಂತರ ಗೊಳ್ಳಬೇಕು ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಅಭಿಪ್ರಾಯ ಪಟ್ಟಿದ್ದಾರೆ. “ಪ್ರಕರಣವು ಒಳಗೊಂಡಿರುವ ಸಮಸ್ಯೆಗಳ ಸಂಕೀರ್ಣತೆ ಮತ್ತು ಸೂಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಪ್ರಸ್ತುತ ವಾರಾಣಸಿ ಸಿವಿಲ್‌ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿರುವ ಈ ಪ್ರಕರಣವನ್ನು ಉತ್ತರ ಪ್ರದೇಶದ ಉನ್ನತ ನ್ಯಾಯಾಂಗ ಸೇವೆಯ ಹಿರಿಯ ಅನುಭವಿ ನ್ಯಾಯಾಂಗ ಅಧಿಕಾರಿಯ ಮುಂದೆ ವಿಚಾರಣೆಗೆ ಒಳಪಡಿಸಬೇಕು. ಆದ್ದರಿಂದ ಪ್ರಕರಣವನ್ನು ವಾರಾಣಸಿ ಸಿವಿಲ್‌ ನ್ಯಾಯಾಧೀಶರಿಂದ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಬೇಕು” ಎಂದು ನಿರ್ದೇಶಿಸಿದ್ದಾರೆ.

ಐದು ಹಿಂದು ಮಹಿಳೆಯರು ಸಲ್ಲಿಸಿರುವ ಮೊಕದ್ದಮೆಯನ್ನು ಪ್ರಶ್ನಿಸಿ ಜ್ಞಾನವಾಪಿ ಮಸೀದಿಯ ಆಡಳಿತ ಮಂಡಳಿ ಸಲ್ಲಿಸಿರುವ ಅರ್ಜಿಯನ್ನು ಆದ್ಯತೆಯ ಮೇರೆಗೆ ಜಿಲ್ಲಾ ನ್ಯಾಯಾಧೀಶರು ವಿಚಾರಣೆ ನಡೆಸಬೇಕು ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ ಅಲ್ಲದೇ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶದಂತೆ ಮುಸ್ಲಿಮರ ವಝು, ಪ್ರಾರ್ಥನೆಗಳಿಗೆ ತೊಂದರೆಯಾಗದಂತೆ ಶಿವಲಿಂಗವನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸುಪ್ರಿಂ ಕೋರ್ಟ್‌ ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!