ನೂಪುರ್ ಶರ್ಮ ಮೇಲೆ ಸುಪ್ರೀಂಕೋರ್ಟ್ ಕಟು ಟಿಪ್ಪಣಿ- ಇದ್ಯಾವ ಸೀಮೆ ನ್ಯಾಯ ಅಂತ ಕೇಳ್ತಿದಾರೆ ನೆಟ್ಟಿಗರು

ಹೊಸದಿಗಂತ ಡಿಜಿಟಲ್ ಡೆಸ್ಕ್

ತಮ್ಮ ಹೇಳಿಕೆ ಕೋಮುಹಿಂಸೆ ಹರಡುವಂಥದ್ದು ಎಂದು ಆರೋಪಿಸಿ ದೇಶದ ನಾನಾ ಕಡೆಗಳಲ್ಲಿ ದಾಖಲಾಗಿರುವ ಎಫ್‌ಐಆರ್ ಗಳನ್ನು ಏಕೀಕರಿಸಿ ದೆಹಲಿಯಲ್ಲಿ ಒಂದೇ ಕಡೆ ವಿಚಾರಣೆ ನಡೆಸಲಿ, ಏಕೆಂದರೆ ತಮಗೆ ಜೀವ ತೆಗೆಯುವ ಬೆದರಿಕೆಗಳು ಬಂದಿವೆ ಎಂದು ನೂಪುರ್ ಶರ್ಮ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ತಳ್ಳಿಹಾಕುತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಮಾಡಿರುವ ಟೀಕೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲೀಗ ಟೀಕೆಗಳು ಎದ್ದಿವೆ.

ಸುಪ್ರೀಂಕೋರ್ಟ್ ಹೇಳಿದ್ದರ ಸಾರಸಂಗ್ರಹ- ದೇಶದಲ್ಲಾಗುತ್ತಿರುವ ವಿಷಮಸ್ಥಿತಿಗೆ ನೂಪುರ್ ಶರ್ಮ ನಾಲಗೆ ಹರಿಬಿಟ್ಟದ್ದೇ ಕಾರಣ. ಅವರು ಎಲ್ಲ ಕೋರ್ಟುಗಳಲ್ಲಿ ವಿಚಾರಣೆ ಎದುರಿಸಲಿ. ಇವರನ್ನು ರಾಜಕೀಯ ಪ್ರಭಾವಳಿ ಕಾಯುತ್ತಿದೆ… ಇತ್ಯಾದಿ, ಇತ್ಯಾದಿ… ಟಿವಿ ಡಿಬೇಟಿನಲ್ಲಿ ನೂಪುರ್ ಶರ್ಮ ಹೇಳಿದ್ದ ಮಾತುಗಳು ಮೌಲ್ವಿಯೊಬ್ಬನ ಮಾತಿಗೆ ಪ್ರತಿಕ್ರಿಯಾತ್ಮಕವಾಗಿ ಬಂದಂಥದ್ದು ಎಂಬ ವಕೀಲರ ವಾದವನ್ನೂ ಸುಪ್ರೀಂಕೋರ್ಟ್ ಕಿವಿಗೆ ಹಾಕಿಕೊಳ್ಳಲಿಲ್ಲ.

ಇದೀಗ ಸುಪ್ರೀಂಕೋರ್ಟ್ ಕಟುಶಬ್ದಗಳಿಗೆ ವ್ಯಕ್ತವಾಗುತ್ತಿರುವ ಟೀಕೆಗಳು ಹೀಗಿವೆ.

ಸಾಯಿ ದೀಪಕ್, ಸುಪ್ರೀಂಕೋರ್ಟ್ ನ್ಯಾಯವಾದಿ: ಅದಾಗಲೇ ಜೀವ ಬೆದರಿಕೆ ಎದುರಿಸುತ್ತಿರುವ ವ್ಯಕ್ತಿಯ ವಿರುದ್ಧದ ಎಲ್ಲ ಪ್ರಕರಣಗಳನ್ನು ಒಂದೆಡೆ ವರ್ಗಾಯಿಸುವುದಕ್ಕೆ ನಿರಾಕರಿಸಿರುವ ಸುಪ್ರೀಂಕೋರ್ಟ್ ನಡೆಯು ಆ ವ್ಯಕ್ತಿ ಮತ್ತಷ್ಟು ಶೋಷಣೆಗೆ ಒಳಗಾಗುವುದಕ್ಕೆ ದಾರಿಮಾಡಿಕೊಟ್ಟಿದೆ. ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಜೀವವನ್ನು ರಕ್ಷಿಸಬೇಕಾಗಿದ್ದ ಕೋರ್ಟ್, ಕೊಲೆಗಡುಕರ ಕೃತ್ಯಗಳಿಗೆ ಈಕೆಯ ನಾಲಗೆಯನ್ನು ದೂಷಿಸುತ್ತಿರುವುದು ಕಲ್ಪನೆ ಮಾಡಲಾಗದ ವಿದ್ಯಮಾನ. ನೂಪುರ್ ವಿರುದ್ಧದ ಪ್ರಕರಣಗಳಿಗೆ ಕೆಳಗಿನ ನ್ಯಾಯಾಲಯಗಳಿನ್ನೂ ತಮ್ಮ ವಿವೇಚನೆ ಉಪಯೋಗಿಸಬೇಕಿರುವ ಸಂದರ್ಭದಲ್ಲೇ, ಅವೆಲ್ಲ ಹೇಗೆ ಯೋಚಿಸಬೇಕು ಎಂಬುದನ್ನು ಪ್ರಭಾವಿಸುವಂತಿದೆ ಸುಪ್ರೀಂಕೋರ್ಟ್ ಟಿಪ್ಪಣಿ.

ರಣವೀರ ಶೌರಿ, ನಟ: ಸುಪ್ರೀಂಕೋರ್ಟ್ ಪ್ರಕಾರ ಎಕ್ಸ್ ವ್ಯಕ್ತಿಯ ಮಾತು ಜೆಡ್ ಎಂಬ ವ್ಯಕ್ತಿಯ ತಲೆಕಡಿಯೋದಕ್ಕೆ ಕಾರಣವಾಗಿಬಿಡುತ್ತದೆ. ಇದನ್ನು ಮಾಡಿದ ವೈ ವ್ಯಕ್ತಿ ಮೇಲೆ ಮಾತೇ ಇಲ್ಲ!

ನೂಪುರ್ ಜೆ ಶರ್ಮ, ಪತ್ರಕರ್ತೆ: ಒಬ್ಬ ಹಿಂದು ವ್ಯಕ್ತಿ ತನಗೆ ಜೀವ ಬೆದರಿಕೆ ಇದೆ ಎಂದು ಪೊಲೀಸರ ಮೊರೆ ಹೋದಾಗ ‘ರಾಜಿಯಾಗಿದೆ, ಸುಮ್ಮನೇ ಮನೆಗೆ ಹೋಗು’ ಎನ್ನಲಾಯಿತು. ಇವತ್ತು ಮಹಿಳೆಯೊಬ್ಬಳು ನನಗೆ ಅತ್ಯಾಚಾರದ ಬೆದರಿಕೆ ಇದೆ ಎಂದು ಹೇಳಿದರೆ ಕೋರ್ಟು ಅವಳಿಗೆ ದೇಶದ ಕ್ಷಮೆ ಕೇಳು ಎನ್ನುತ್ತಿದೆ. ವ್ಯವಸ್ಥೆ ಎಲ್ಲವನ್ನೂ ಬೀದಿ ಬಲಕ್ಕೆ ಬಿಟ್ಟುಬಿಟ್ಟಿದೆ. ಆತ್ಮರಕ್ಷಣೆ ಮಾತನಾಡಿದರೆ ಅಲ್ಲೂ ಜೈಲಿಗೆ ಹಾಕಿ ಇವರನ್ನು ಎನ್ನುತ್ತಾರೆ.

“ಕಡಿಯೋದು ಕ್ರಿಮಿನಲ್ ಗಳ ಕೆಲಸ, ನೀವು ಹೊರಗೆ ತಿರುಗಿ ಕತ್ತು ತೋರಿಸಿದ್ದೇ ತಪ್ಪು” ಎಂದು ಕಾಮೆಡಿಯನ್ ಒಬ್ಬರು ಮಾಡಿದ್ದ ಹಾಸ್ಯವನ್ನು ಸುಪ್ರೀಂಕೋರ್ಟ್ ವಾಸ್ತವವಾಗಿಸಿಬಿಟ್ಟಿದೆ ಎಂದು ನಿರ್ದೇಶಕ ವಿವೇಕ ರಂಜನ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!